ತಮಿಳು ಸಾಹಿತ್ಯ

ದ್ರಾವಿಡ ಭಾಷಾ ಸಾಹಿತ್ಯದಲ್ಲಿ ತಮಿಳು ಸಾಹಿತ್ಯ ಅತ್ಯಂತ ಪ್ರಾಚೀನವೂ ಬಹು ಸಮೃದ್ಧವೂ ಆದಿದಾಗಿದೆ. 1. ಸಂಗಂ ಕಾವ್ಯ ಸಂಗ್ರಹಗಳು. 2. ಸಂಗಂ ಸಾಹಿತ್ಯ. 3. ಹದಿನೆಂಟು ಸಣ್ಣ ಕೃತಿಗಳು. 4. ಯಮಳ ಮಹಾಕಾವ್ಯ. 5. ಭಕ್ತಿಗೀತೆಗಳು. 6. ಮಧ್ಯಯುಗದ ಮಹಾಕಾವ್ಯಗಳು. 7. ವ್ಯಾಖ್ಯಾನಕಾರರ ಕಾಲ. 8. ಪಾಶ್ಚಾತ್ಯ ಪ್ರಭಾವ 9. ಇಪ್ಪತ್ತನೆಯ ಶತಮಾನ-ಹೀಗೆ ಒಂಬತ್ತು ಭಾಗಗಳಾಗಿ ಬಹು ಸಂಗ್ರಹವಾಗಿ, ತಮಿಳು ಸಾಹಿತ್ಯವನ್ನು ಇಲ್ಲಿ ನಿರೂಪಿಸಿದೆ.

ಸಂಗಂ ಕಾವ್ಯ ಸಂಗ್ರಹಗಳು : ಪ್ರಾಚೀನ ತಮಿಳು ಸಾಹಿತ್ಯ ಕೃತಿಗಳು ಕ್ರಿ.ಪೂ. 300ರಷ್ಟು ಹಿಂದಕ್ಕೆ ಹೋಗುತ್ತವೆ. ಅವೆಲ್ಲವೂ ಲೌಕಿಕವಾದವು. ಅವುಗಳಲ್ಲಿ ಸುಮಾರು ಮೂರನೆಯ ಒಂದು ಭಾಗವಾದ ಪು¾ಂ ಪ್ರಕಾರ ಆಳುವವರ ಶಕ್ತಿ, ಔದಾರ್ಯ, ಜನರ ಸಂಸ್ಕøತಿ ಮತ್ತು ಪೌರತ್ವಗಳನ್ನು ಕುರಿತದ್ದಾಗಿದೆ. ಉಳಿದ ಅಗಂ ಪ್ರಕಾರದ ಭಾಗ ಕವಿಗಳಿಂದ ಆದರ್ಶೀಕರಿಸಲ್ಪಟ್ಟ ಗುಪ್ತ ಪ್ರಣಯ ಮತ್ತು ವಿವಾಹ ಜೀವನವನ್ನು ಕುರಿತದ್ದು. ಪ್ರಣಯ ಇದರಲ್ಲಿ ಪ್ರಕೃತಿಯ ಹಿನ್ನೆಲೆಯಲ್ಲಿ ಅದರ ಎಲ್ಲ ತರಹದ ಸೂಕ್ಷ್ಮ ಮಾನಸಿಕ ಸ್ಥಿತಿಗಳೊಂದಿಗೆ ಚಿತ್ರಿತವಾಗಿದೆ. ಕಾವ್ಯವಸ್ತು ಎಷ್ಟೇ ಶೃಂಗಾರಮಯವಾಗಿದ್ದರೂ ಕವಿಗಳು ಅದನ್ನು ಸೊಗಸಾಗಿ ಮತ್ತು ಗಂಭೀರವಾಗಿ ಹೆಣೆದಿದ್ದಾರೆ. ಕವಿಗಳು ಈ ತಮ್ಮ ರಚನೆಗಳನ್ನು ತಮ್ಮ ಸ್ವಂತ ಸ್ಥಳಗಳಲ್ಲಿ ಇಲ್ಲವೆ ತಮ್ಮ ಆಶ್ರಯದಾತರಲ್ಲಿ ಬಿಟ್ಟರು. ಅನಂತರ ಅವನ್ನು ಘನ ವಿದ್ವಾಂಸರು ಸಂಗ್ರಹಿಸಿ ಸಂಪಾದಿಸಿ ಒಂಬತ್ತು ಬೃಹತ್ ಕಾವ್ಯಸಂಗ್ರಹಗಳನ್ನಾಗಿ ಹೊರತಂದಿದ್ದಾರೆ. ಕಾಲಕ್ರಮದಲ್ಲಿ ಸಾವಿರಾರು ಅಂಥ ರಚನೆಗಳು ಹಾಳಾದುವಲ್ಲದೆ ಅವನ್ನು ಸಂಗ್ರಹಿಸುವಾಗ ಮತ್ತು ಸಂಕಲನ ಮಾಡುವಾಗ ಕೆಲವು ಸಾವಿರ ಕೃತಿಗಳು ಬಿಟ್ಟುಹೋದವು; ಉಳಿದವು ನಾಶವಾದವು. ಅವುಗಳಲ್ಲಿ ಎಂಟು ಕಾವ್ಯಸಂಗ್ರಹಗಳನ್ನು ಎಟ್ಟುತ್ತೊಕಯ್ ಎಂದೂ ಹತ್ತು ದೀರ್ಘ ವರ್ಣನಾತ್ಮಕ ಭಾಗಗಳನ್ನೊಳಗೊಂಡ ಒಂಬತ್ತನೆಯ ಕಾವ್ಯಸಂಗ್ರಹವನ್ನು ಪತ್ತುಪ್ಪಾಟ್ಟು ಎಂದೂ ಕರೆಯುತ್ತಾರೆ. ಮೂರು ಸಾಲಿನ ಭಾವಗೀತೆಗಳಿಂದ ಹಿಡಿದು ಅತಿ ದೊಡ್ಡದಾದ 782 ಸಾಲಿನ ವರ್ಣನಾತ್ಮಕ ಕಾವ್ಯದ ಸುಮಾರು 2,400 ಪದ್ಯಗಳು ಈ ಕಾವ್ಯ ಸಂಗ್ರಹಗಳಲ್ಲಿ ದೊರಕುತ್ತವೆ. ಈ ರಚನೆಗಳ ವಸ್ತು ಮತ್ತು ಛಂದಸ್ಸು ತಮಿಳಿನ ವೈಶಿಷ್ಟ್ಯವಾಗಿವೆಯಲ್ಲದೆ ಆ ಕಾಲದಲ್ಲಿ ಇವುಗಳಿಗೆ ಸರಿಸಮಾನವಾದವು ಬೇರೆ ಯಾವುದೇ ಸಾಹಿತ್ಯಗಳಲ್ಲಿಯೂ ಇರಲಿಲ್ಲ. ಪದಪ್ರಯೋಗ ಶುದ್ಧತೆ, ಚಿಂತನೆಯ ಸಂಕೀರ್ಣತೆ, ಅಭಿವ್ಯಕ್ತಿಯ ನಿಸ್ಸಂಕೋಚತ್ವ ಮತ್ತು ಭಾವತೀವ್ರತೆ-ಇವು ಪ್ರಾರಂಭ ಕಾಲದ ಕೃತಿಗಳ ಲಕ್ಷಣಗಳಾಗಿವೆ. ಮಾನವೀತೆಯತೆ ಗೋಪ್ಯವಾಗಿ ಮತ್ತು ತತ್ತ್ವದಿಂದೊಡಗೂಡಿ ಕಲಾತ್ಮಕ ಅಭಿವ್ಯಕ್ತಿಯನ್ನು ಪಡೆದಿದೆ. ಇನ್ನು ಕಾಣಿಕೆಯಾಗಿ ಇತ್ತ ಸುಮಾರು 500 ಜನ ಕವಿಗಳ ಪೈಕಿ ಸುಮಾರು 30 ಜನ ಕವಯಿತ್ರಿಯರು ಮತ್ತು ಸುಮಾರು 25 ಜನರು ಆಸ್ಥಾನ ಕವಿಗಳು.

ಪ್ರಾಚೀನ ತಮಿಳು ಸಾಹಿತ್ಯದ ಉಗಮ ಕಾಲದಲ್ಲಿ ಅದರ ಮೇಲೆ ಬೇರೆ ದೇಶಗಳ ಸಾಹಿತ್ಯ ಮತ್ತು ಸಂಸ್ಕøತಿಯ ಪ್ರಭಾವ ತುಂಬ ಕಡಿಮೆ; ಈ ಪ್ರಾಚೀನ ತಮಿಳು ಕೃತಿಗಳು ಕ್ರಮೇಣವಾಗಿ ಈ ನೆಲದಲ್ಲಿಯೇ ಇಲ್ಲಿನ ಭೌತಿಕ ಪರಿಸರಕ್ಕನುಗುಣವಾಗಿ ಮತ್ತು ಜನಜೀವನ ಸಂಸ್ಕøತಿಗಳ ಪರಿಸರದಲ್ಲೇ ಹುಟ್ಟಿಕೊಂಡವು. ಈ ನೆಲ ಪರ್ವತಗಳಿಂದ ಅರಣ್ಯಗಳಿಂದ ವ್ಯವಸಾಯ ಯೋಗ್ಯ ಭೂಮಿಯಿಂದ ಮತ್ತು ಕರಾವಳಿ ಪ್ರದೇಶಗಳಿಂದ ಸಂಪದ್ಭರಿತವಾಗಿತ್ತು. ಇವುಗಳಿಗನುಸಾರವಾಗಿ ಪ್ರದೇಶಗಳನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿದ್ದರು. ಅನೇಕ ವರ್ಷಗಳ ಕಾಲ ಸತತವಾಗಿ ಮಳೆ ಇಲ್ಲದೆ ಒಣಗಿ ಮರಳುಕಾಡಿನ ರೀತಿಯ ಪರ್ವತ ಪ್ರದೇಶಗಳು ಮತ್ತು ಅರಣ್ಯಗಳನ್ನು ಐದನೆಯ ಪ್ರದೇಶವನ್ನಾಗಿ ಪರಿಗಣಿಸಲಾಗಿತ್ತು. ಪ್ರಾಚೀನ ಕವಿಗಳಿಗೆ ಈ ನಾಲ್ಕು ಸಂಪದ್ಭರಿತ ಪ್ರದೇಶಗಳು ಮತ್ತು ಮರುಳುಗಾಡು ಮಾದರಿಯ ಐದನೆಯ ಪ್ರದೇಶ ಐದು ಆದರ್ಶ ಪ್ರಣಯ ಚಿತ್ರಣಗಳಿಗೆ ಹಿನ್ನೆಲೆಯಾದವು. ಪರ್ವತ ಪ್ರದೇಶಗಳಲ್ಲಿ ಪ್ರೇಮಿಗಳ ಮಿಲನ, ನಾಯಿಕೆ ತಾಳ್ಮೆಯಿಂದ ಅರಣ್ಯ ಪ್ರದೇಶಗಳಲ್ಲಿ ಕಾಯುವುದು, ವ್ಯವಸಾಯ ಯೋಗ್ಯವಾದ ಭೂಪ್ರದೇಶದಲ್ಲಿ ವಿಷಣ್ಣಳಾಗುವುದು, ಮರಳುಗಾಡು ಪ್ರದೇಶದಲ್ಲಿ ಪ್ರೇಮಿಗಳ ಅಗಲುವಿಕೆ ಮತ್ತು ತೀರಪ್ರದೇಶಗಳಲ್ಲಿ ಪ್ರೇಮಿಗಳು ವಿರಹತಾಪವನ್ನು ಅನುಭವಿಸುವುದು ಹೀಗೆ, ಈ ಒಂದೊಂದಕ್ಕೂ ವಿಶೇಷವಾದ ಪ್ರಾಕೃತಿಕ ಹಿನ್ನೆಲೆ ಉಂಟು. ಗೊತ್ತಾದ ಪ್ರದೇಶ, ಗೊತ್ತಾದ ದಿನ, ಗೊತ್ತಾದ ವೇಳೆ. ಆ ಪ್ರದೇಶಕ್ಕೇ ಮೀಸಲಾದ ನವ್ಯಪ್ರಾಣಿ ಮತ್ತು ಸಸ್ಯ. ಆ ಪ್ರದೇಶದಲ್ಲಿ ವಾಸಿಸುವ ಜನರ ವಿಶಿಷ್ಟ ಅಭ್ಯಾಸ, ಪದ್ಧತಿ ಆಹಾರ, ಸಂಗೀತ-ಇವನ್ನು ಇಲ್ಲಿ ಕಾಣಬಹುದು. ಪ್ರತಿಯೊಂದು ಪ್ರದೇಶದ ನೈಸರ್ಗಿಕ ವೈಚಿತ್ರ್ಯಗಳಿಗೂ ವರ್ಣಿತ ಪ್ರಣಯ ಜೀವನಕ್ಕೂ ಸಂಬಂಧ ಉಂಟು. ಹೀಗೆ ಮಾನವನ ಪ್ರಣಯನಾಟಕಕ್ಕೆ ಹಿನ್ನೆಲೆಯಾಗಿ ಪ್ರಕೃತಿಯನ್ನು ವಿಸ್ತಾರವಾಗಿ ಸಂಗಂ ಕವಿಗಳು ಬಳಸಿದರು.

ಸಾಹಿತ್ಯ ಸಂಪ್ರದಾಯಗಳಾದ ಪ್ರಣಯದ ಐದು ಮುಖಗಳು, ಋತುಗಳು, ವೇಳೆಗಳು, ಆಯಾ ಪ್ರದೇಶಕ್ಕೆ ಮಾತ್ರ ಸೇರಿದ ಪ್ರಾಣಿ ಮತ್ತು ಸಸ್ಯವರ್ಗಗಳು, ಮತ್ತು ಯುದ್ಧದ ಕೆಲವು ಗೊತ್ತಾದ ಚಟುವಟಿಕೆಗಳು-ಇವೆಲ್ಲ ಸದ್ಯಕ್ಕೆ ತಮಿಳಿನ ಅತ್ಯಂತ ಹಿಂದಿನ ವ್ಯಾಕರಣ ಕೃತಿಯಾದ ತೊಲ್‍ಕಾಪ್ಪಿಯನಾರ್‍ನ ತೊಲ್‍ಕಾಪ್ಪಿಯಮ್ನಲ್ಲಿ ಸೂತ್ರೀಕರಣಗೊಂಡಿವೆ. ಇದರ ಕಾಲ ಕ್ರಿ.ಪೂ. 300ಕ್ಕೂ ಹಿಂದೆ ಹೋಗುತ್ತದೆ. ಇದು ಮೂರು ಪ್ರಕರಣಗಳಲ್ಲಿದೆ; ಮೊದಲನೆಯದು ಧ್ವನಿ ವಿಜ್ಞಾನ ಮತ್ತು ಧ್ವನಿಮಾ ವಿಜ್ಞಾನವನ್ನೂ ಎರಡನೆಯದು ಆಕೃತಿಮಾವಿಜ್ಞಾನ ಮತ್ತು ವಾಕ್ಯವಿಜ್ಞಾನವನ್ನೂ ಕುರಿತದ್ದು. ಮೂರನೆಯದು ಆ ಕಾಲದ ಸಾಹಿತ್ಯ ಸಂಪ್ರದಾಯಗಳಿಗೆ ಸೇರಿದ್ದು. ಅನೇಕ ಬಗೆಯ ರಚನೆಗಳಿಗೆ ನಿಯಮಗಳನ್ನು ಹೇಳಿವುದರಿಂದಲೂ ಪ್ರಾಚೀನ ಸಾಹಿತ್ಯಕೃತಿಗಳ ಉದ್ಧರಣಗಳಿರುವುದರಿಂದಲೂ ಇಂದು ಕಾಣದಿರುವ ಬೇರೆ ಬೇರೆ ವ್ಯಾಕರಣ ಗ್ರಂಥಗಳ ಸೂಚನೆ ಇರುವುದರಿಂದಲೂ ಈ ಕೃತಿ ತನಗಿಂತ ಹಿಂದೆ ಅನೇಕ ಶತಮಾನಗಳಿಂದ ನಡೆದುಬಂದ ತಮಿಳು ಸಾಹಿತ್ಯ ಸಂಸ್ಕøತಿಗಳನ್ನು ಸೂಚಿಸುತ್ತದೆ. ಮುಂದಿನ ವ್ಯಾಖ್ಯಾನಕಾರರಲ್ಲಿ ನಾವು ಆ ಕೆಲವು ಕೃತಿಗಳ ಹೆಸರುಗಳನ್ನಷ್ಟೇ ಕಾಣಬಹುದು.

ಸಂಗಂ ಸಾಹಿತ್ಯ : ( ಕ್ರಿ. ಪೂ. 300 ರಿಂದ ಕ್ರಿ.ಶ.200) ಬೇರೆ ಬೇರೆಯ ಎಂಟು ಜನ ಕವಿಗಳಿಂದ ಬರೆಯಲ್ಪಟ್ಟ ಪತ್ತುಪ್ಪಾಟ್ಟಿನಲ್ಲಿ ಹತ್ತು ವರ್ಣನಾತ್ಮಕ ಕಾವ್ಯ ಭಾಗಗಳಿವೆ. ಶ್ರೀಮಂತಿಕೆಯಿಂದೊಡಗೂಡಿದ ಮಹಾಕಾವ್ಯಶೈಲಿಯಲ್ಲಿ ಬರೆಯಲ್ಪಟ್ಟ ಅವು ಪ್ರಕೃತಿ ಮತ್ತು ಮಾನವೀಯತೆಯ ವಿಶಿಷ್ಟ ಚಿತ್ರಗಳನ್ನು ಕೊಡುತ್ತವೆ. ಅವುಗಳಲ್ಲಿ 103 ಸಾಲಿನ ವರ್ಣನಾತ್ಮಕ ಕಾವ್ಯಭಾಗ ಅತ್ಯಂತ ಚಿಕ್ಕದ್ದಾದರೆ, 782 ಸಾಲುಗಳದ್ದು ಅತ್ಯಂತ ದೊಡ್ಡದು.

ನಕ್ಕೀರರ್‍ನ ಏಳನೆಯ ವರ್ಣನಾತ್ಮಕ ಕಾವ್ಯ ನೆಡುನಲ್ವಾಡಯ್ ಅನ್ನು ಪತ್ತುಪ್ಪಾಟ್ಟಿಗೆ ಪ್ರಾತಿನಿಧಿಕವಾಗಿ ಪರಿಗಣಿಸಬಹುದು. ಪಾಂಡಿಯ ದೊರೆ ನೆಡುಂಜೆಳಿಯನ್ನನ ಆರಾಧನೆ ಇದರ ವಸ್ತು. ದೊರೆ ಯುದ್ಧವೊಂದರಲ್ಲಿ ತೊಡಗಿ ಚಳಿಗಾಲದ ಗುಡಾರದಲ್ಲಿದ್ದಾನೆ. ಗಾಯಗೊಂಡ ರಣವರರನ್ನು, ಆನೆ ಕುದುರೆಗಳನ್ನು ಉಪಚರಿಸುತ್ತ ನಿದ್ರೆಯಿಲ್ಲದ ಚಳಿಯ ಹೊಡೆತದಲ್ಲಿ ದೊರೆ ಅತ್ತಿಂದಿತ್ತ ಓಡಾಡುತ್ತಿದ್ದಾನೆ. ಒಂದೇ ಸಮನೆ ಉತ್ತರದ ಗಾಳಿ ಬೀಸುತ್ತಿದೆ. ದೊರೆ ರಾಜಛತ್ರಿಯ ಕೆಳಗೆ ಓಡಾಡುತ್ತಿದ್ದಾನೆ. ಪಂಜಿನ ಉರಿ ದಕ್ಷಿಣದ ಕಡೆಗೆ ಬಾಗುತ್ತಿದೆ. ಅದೇ ಕಾಲದಲ್ಲಿ ಕಲಾತ್ಮಕ ಹೊದ್ದಿಕೆಯನ್ನುಳ್ಳ, ಚೆನ್ನಾಗಿ ಬಣ್ಣ ಹೊಡೆದ ಆಭರಣಗಳಿಂದ ಶೃಂಗಿಸಿದ ಮೆತ್ತನೆಯ ಸುಪ್ಪತ್ತಿಗೆಯನ್ನುಳ್ಳ ಒಂದು ದಂತದ ಮಂಚದ ಮೇಲೆ ಅಸ್ತವ್ಯಸ್ತ ಉಡುಪು ಧರಿಸಿ ನಿದ್ರೆಯಿಲ್ಲದೆ ರಾಜಧಾನಿ ಮಧುರೈ ಅರಮನೆಯಲ್ಲಿ ರಾಣಿ ಮಲಗಿದ್ದಾಳೆ. ಮರದ ಮೇಲಿನ ಕೋತಿಗಳು ಚಳಿಯಿಂದ ನಡಗುತ್ತ ತಮ್ಮ ಅವಯವಗಳನ್ನು ಮುದುರಿಕೊಳ್ಳುತ್ತಿವೆ: ಹಕ್ಕಿಗಳು ಹಾರುವುದನ್ನು ನಿಲ್ಲಿಸಿವೆ; ಚಳಿಯಿಂದ ನಡಗುತ್ತಿರುವ ಹಸುಗಳು ತಾಯಿತನದ ವಾತ್ಸಲ್ಯನ್ನು ತೊರೆದು ತಮ್ಮ ಕರುಗಳನ್ನು ಒದೆಯುತ್ತಿವೆ; ಕುರುಬರು ತಮ್ಮ ಗ್ರಾಮೀಣವಾದ ತಮಾಷೆ ಆಟಗಳಲ್ಲಿ ಮುಳುಗಿಲ್ಲವಾದರೂ ಬೆಂಕಿ ಹತ್ತಿಸಿ ಅಂಗೈಗಳನ್ನು ಬೆಚ್ಚನೆ ಮಾಡಿಕೊಂಡು ಆಗಿಂದಾಗ್ಗೆ ತಮ್ಮ ಕೆನ್ನೆಗಳಿಗೆ ಒತ್ತಿಕೊಳ್ಳುತ್ತಿದ್ದಾರೆ. ಮೋಡಗಳ ಮಧ್ಯ ಸೂರ್ಯ ಕಾಣಿಸಿಕೊಳ್ಳುವುದೇ ಅಪರೂಪವಾದ್ದರಿಂದ ಬೆಳಗಿನಿಂದ ಮನೆಯಲ್ಲಿರುವ ಪಾರಿವಾಳಗಳು ಹಗಲಿನಿಂದ ರಾತ್ರಿಯನ್ನು ಪ್ರತ್ಯೇಕಿಸುವಲ್ಲಿ ಸೋತಿವೆ. ಒಂದೇ ಸಮನೆ ಮನೆಯಲ್ಲೇ ಕುಳಿತು ಬೇಸತ್ತ ಅವು ಮಂಕು ಕಳೆದುಕೊಳ್ಳಲು ತಮ್ಮ ಮುದ್ದಾದ ಜೊತೆಗಾರಗೊಂದಿಗೆ ವಿನ್ಯಾಸನ್ನು ಬದಲಿಸುತ್ತ, ಅಲ್ಲಲ್ಲೆ ಸುತ್ತಾಡುತ್ತಿವೆ. ಬೇಸಗೆ ಕಾಲದಲ್ಲಿ ತೀರ ಉಪಯೋಗಕ್ಕೆ ಬಂದ ಮನಮೋಹಕವಾದ ಬೀಸಣಿಗೆ ಜೇಡರ ಬಲೆ ಕಟ್ಟಿ ಈಗ ಮೂಲೆಯಲ್ಲಿ ನೇತಾಡುತ್ತಿದೆ. ಎಲ್ಲೆಲ್ಲೂ ಅಗ್ಗಿಷ್ಟಿಕೆಯ ಅವಶ್ಯಕತೆ ಮಾತ್ರ ಕಾಣುತ್ತಿದೆ. ರಭಸದಿಂದ ಬೀಸುತ್ತಿರುವ ಗಾಳಿಯನ್ನು ತಡೆಯಲು ಕಿಟಕಿಗಳು ಮುಚ್ಚಲ್ಪಟ್ಟಿವೆ. ಹೀಗೆ ಉತ್ತರದ ಗಾಳಿಯ ಪರಿಣಾಮಗಳನ್ನು ಕಲಾತ್ಮಕವಾಗಿ ಇಲ್ಲಿ ಚಿತ್ರಿಸಿದೆ. ರಾಣಿ ಏಕಾಂಗಿನಿಯಾಗಿ ಮಂಚದ ಮೇಲೆ ಕುಳಿತು ತನ್ನ ಪ್ರಣಯ ಜೀವನವನ್ನೂ ನೆನಪಿಸುವ ಪರದೆಯ ಮೇಲಿನ ಬಣ್ಣದ ಚಿತ್ರಗಳನ್ನು ನೋಡುತ್ತ ಕಣ್ಣೀರು ಸುರಿಸುತ್ತಿದ್ದಾಳೆ. ಅರಮನೆಯಲ್ಲಿ ವಯಸ್ಸಾದ ಹೆಂಗಸರು ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿ ರಾಜ ಯುದ್ಧರಂಗದಲ್ಲಿ ವಿಜಯಶಾಲಿಯಾಗಿ ಬೇಗ ಹಿಂದಿರುಗಿ ಬರಲೆಂದು ಯುದ್ಧದೇವತೆಯನ್ನು ಪ್ರಾರ್ಥಿಸುತ್ತಿದ್ದಾರೆ. ಹೀಗೆ ಇಡೀ ಕಾವ್ಯ ಅದ್ಭುತ ಕಲ್ಪನೆಗಳಿಂದ ರಮ್ಯವಾಗಿದ್ದು. ಕಾವ್ಯದ ಶಿರೋನಾಮೆ ಅರ್ಥಪೂರ್ಣವಾಗಿದೆ ಮತ್ತು ಮಹತ್ತರವಾದ ಧ್ವನಿಯಿಂದ ಕೂಡಿದೆ. ನೆಡುನಲ್‍ವಾಡಯ್ ಎಂದರೆ ಆಯಾಸಕರವಾದ ಆದರೆ ಅನುಕೂಲಕರವಾದ ಉತ್ತರಮಾರುತ ಎಂದು ಅರ್ಥ.

ಎಟ್ಟುತ್ತೊಕೈ (ನೋಡಿ- ಎಟ್ಟುತ್ತೊಕೈ) ಎಂಬ ಕಾವ್ಯ ಸಂಕಲನಗಳಲ್ಲಿ ಪುಛಿನಾನೂರ ಅತ್ಯಂತ ಜನಪ್ರಿಯವಾದುದು ಮತ್ತು ಚಾರಿತ್ರಿಕವಾಗಿ ಬಹು ಬೆಲೆಯುಳ್ಳದ್ದು. ಪುಛಿ ಎಂದರೆ ಯುದ್ಧ ವಸ್ತುಗಳು, ಆಡಳಿತ, ಔದಾರ್ಯ, ಬದುಕಿನ ಸತ್ಯಗಳು ಮುಂತಾದವುಗಳನ್ನು ಕುರಿತ ಒಂದು ಸಾಹಿತ್ಯ ಪ್ರಕಾರ. ತಲೆಬರೆಹದಲ್ಲೇ ಹೇಳಿರುವಂತೆ ಈ ಸಂಗ್ರಹದಲ್ಲಿ ಈ ವಸ್ತುಗಳನ್ನುಳ್ಳ ನಾನೂರು ನುಡಿಗಳಿವೆ. ಆಳುವವರ ಹಿತೈಷಿಗಳೂ ಆಪ್ತಸ್ನೇಹಿತರೂ ಅದರ ಸುಮಾರು 150 ಜನ ಕವಿಗಳ ಈ ಸಂಗ್ರಹಕ್ಕೆ ತಮ್ಮ ಕಾಣಿಕೆ ಇತ್ತಿದ್ದಾರೆ. ಈ ಸಂಗ್ರಹದಲ್ಲಿರುವ ಅನೇಕ ಪದ್ಯಗಳ ಪ್ರಕಾರ ಅವರು ವಿರೋಧಿ ದೊರೆಗಳಿಗೆ ಸೂಕ್ತದ ಬುದ್ಧಿವಾದ ಹೇಳುವುದರ ಮೂಲಕ ಯುದ್ಧವನ್ನು ಸಹ ನಿವಾರಿಸುತ್ತಿದ್ದರು. ಅವರು ಆಳುವವರೊಂದಿಗೆ ತುಂಬ ಚಾತುರ್ಯದಿಂದ ಮತ್ತು ಪ್ರಯೋಗಶೀಲ ಬುದ್ಧಿಯಿಂದ ವರ್ತಿಸುತ್ತಿದ್ದು ಅವರ ಮೇಲೆ ಪ್ರಭಾವ ಬೀರಬಲ್ಲರಾಗಿದ್ದರು. ಕೆಲವು ರಾಜರು ಕವಿಗಳೂ ಆಗಿದ್ದರಾಗಿ ಅವರ ರಚನೆಗಳಿಗೆ ಇಲ್ಲಿ ಸ್ಥಾನ ಸಿಕ್ಕಿದೆ. ಅನೇಕ ಸತ್ಯಗಳನ್ನು ನೇರವಾಗಿ ಮತ್ತು ಕಲಾತ್ಮಕವಾಗಿ ತಮ್ಮದೇ ಆದ ರೀತಿಯಲ್ಲಿ ಇಲ್ಲಿ ಅಭಿವ್ಯಕ್ತಿಪಡಿಸಲಾಗಿದೆ.

ಇದೇ ವಸ್ತುವಿನ ಮೇಲೆ ಇನ್ನೊಂದು ಕಾವ್ಯ ಸಂಗ್ರಹ ಉಂಟು. ಚೇರವಂಶದ ಹತ್ತು ರಾಜರನ್ನು ಕೀರ್ತಿಸುವ 100 ಪದ್ಯಗಳಿರುವ ಒಂದು ಸಂಕಲನ ಪೆದಿಟ್ಟುಪ್ಪತ್ತು. ಇದರಲ್ಲಿ ಮೊದಲನೆಯ ಮತ್ತು ಕೊನೆಯ ಹತ್ತು ಹಾಳಾಗಿವೆ. ಈಗ ಸಿಕ್ಕಿರುವ 80 ಪದ್ಯಗಳನ್ನು ಚೇರ ದೊರೆಗಳಿಂದ ಸಾಕಷ್ಟು ಸನ್ಮಾನ ಗಳಿಸಿದ ಬೇರೆ ಬೇರೆ ಕವಿಗಳು ಬರೆದರೆಂದು ಪ್ರತೀತಿ. ಪ್ರತಿಯೊಂದು ಪದ್ಯದ ಸಂಗತಿಯನ್ನೂ ತಿಳಿಸುವಂತೆ ಆಯಾ ಪದ್ಯಕ್ಕೆ ಒಂದೊಂದು ಶೀರ್ಷಿಕೆಯುಂಟು.

ಪರಿಪಾಡಲ್‍ನಲ್ಲಿ ಎಪ್ಪತ್ತು ದೊಡ್ಡ ಹಾಡುಗಳಿವೆ; ಇವುಗಳಲ್ಲಿ ಈಗ ಕೇವಲ ಇಪ್ಪತ್ನಾಲ್ಕು ಮಾತ್ರ ದೊರಕುತ್ತವೆ. ಪ್ರಾಚೀನ ಕಾಲದಲ್ಲಿ ಜನಪ್ರಿಯವಾಗಿದ್ದ ಒಂದು ಗೊತ್ತಾದ ಛಂದಸ್ಸನ್ನು ತಲೆಬರೆಹ ಸೂಚಿಸುತ್ತದೆ. ಸಾಮಾನ್ಯವಾಗಿ ಈ ಹಾಡುಗಳ ವಸ್ತು ಪ್ರಣಯವಾಗಿದ್ದರೂ ಇವುಗಳಲ್ಲಿ ಕೆಲವು ದೇವರುಗಳನ್ನೂ ಇನ್ನು ಕೆಲವು ವಯ್‍ಗಯ್ ನದಿಯನ್ನೂ ಮದುರೈ ಜಿಲ್ಲೆಯ ತಿರುಪ್ಪರಮ್ ಕುನ್ರಂ ಬೆಟ್ಟಗಳನ್ನೂ ಕುರಿತು ಸ್ತುತಿಸುವ ಹಾಡುಗಳಾಗಿವೆ.

ಕಲಿ ಛಂದಸ್ಸಿನಲ್ಲಿ ಸಂಕಲಿಸಿರುವ ಕಲಿತ್ತೋಗಯ್‍ನಲ್ಲಿ ನೂರೈವತ್ತು ಹಾಡುಗಳಿವೆ. ಇವು ಉತ್ತಮ ಲಯದಿಂದ ಕೂಡಿ ಆಹ್ಲಾದಕರವಾಗಿಯೂ ಮನಸ್ಸ್ಸಿಗೆ ತಟ್ಟುವ ಹಾಗೆಯೂ ಇವೆ. ಸಂಭಾಷಣಾ ರೂಪದಲ್ಲಿ ಮತ್ತು ಸ್ವಗತ ಭಾಷಣ ರೂಪದಲ್ಲಿ ಪ್ರಣಯದ ಮುಖಗಳನ್ನು ಇವು ತಿಳಿಸುತ್ತವೆಯಲ್ಲದೆ ಉಪಮೆ, ರೂಪಕ ಮತ್ತು ಸೂಕ್ಷ್ಮಧ್ವನಿಗಳಿಂದ ಶ್ರೀಮಂತವಾಗಿವೆ. ಇವುಗಳ ಕರ್ತೃಗಳು ಐದು ಜನ ಎಂದು ಪ್ರತೀತಿ.

ಪ್ರಕೃತಿಯ ಹಿನ್ನೆಲೆಯಲ್ಲಿ ಪ್ರಣಯದ ಹಲವು ಮುಖಗಳ ಚಿತ್ರಣವನ್ನು ಉಳಿದ ನಾಲ್ಲು ಕಾವ್ಯಸಂಗ್ರಹಗಳಲ್ಲಿ ಕಾಣಬಹುದು. ಅವು ಹೆಚ್ಚು ಕಡಿಮೆ ಸರಳ ರಗಳೆಯಲ್ಲಿ ಸ್ವಗತ ಭಾಷಣ ರೂಪಗಳಲ್ಲಿ ಇವೆ. ಪಾದಗಳಿಗನುಗುಣವಾಗಿ ಅವನ್ನು ವಿಭಾಗಿಸಬಹುದಾಗಿದೆ. ಅಗನಾನೂರು ಎಂಬ ತಲೆಬರೆಹವನ್ನುಳ್ಳ ಸಂಕಲನದಲ್ಲಿ 13 ರಿಂದ 37 ಸಾಲಿನ 400 ಕವನಗಳನ್ನು ಸಂಗ್ರಹಿಸಲಾಗಿದೆ. ಪ್ರತಿಯೊಂದರಲ್ಲೂ 9 ರಿಂದ 12 ಸಾಲುಗಳುಳ್ಳ ಇನ್ನೂ 400 ಕವನಗಳನ್ನು ನಟ್ರಿಣಯ್ ಎಂದು ಕರೆಯಲಾಗಿದೆ. ಪ್ರತಿಯೊಂದರಲ್ಲೂ 4 ರಿಂದ 8 ಸಾಲುಗಳುಳ್ಳ 400 ಅನ್ನು ಕುಜನ್‍ತ್ತೂಗೈ ಎಂದು ಕರೆದಿದೆ: ಪ್ರತಿಯೊಂದರಲ್ಲೂ 3 ರಿಂದ 6 ಸಾಲುಗಳುಳ್ಳ ಇನ್ನೂ 500 ಕವನಗಳನ್ನು ಐ+¾ುನೂ¾ು ಎಂದು ಹೆಸರಿಸಿದೆ.

ಕವಿಗಳು ಹೆಣ್ಣು ಗಂಡುಗಳ ಶೃಂಗಾರಮಯ ಭಾವನೆಗಳನ್ನೂ ಪ್ರಕೃತಿಯ ಸೌಂದರ್ಯವನ್ನೂ ಆತ್ಮೀಯತೆಯಿಂದ ಮತ್ತು ತೀರ ಹತ್ತಿರದ ಸಂಸರ್ಗದಿಂದ ಒಟ್ಟಿಗೆ ಹೆಣೆದಿದ್ದಾರೆ. ಮಾನವೀಯ ಭಾವನೆಗಳನ್ನು ಕುರಿತ ಅವರ ಇಲ್ಲಿನ ಅಂತರ್ದೃಷ್ಟಿ ಅಪ್ರತಿಮವಾದುದು. ಪ್ರಕೃತಿಯ ಹಿನ್ನೆಲೆಗೆ ವಿರುದ್ಧವಾಗಿ ಮಾನವೀಯ ಭಾವೋದ್ರೇಕಗಳನ್ನು ನಿರ್ದಿಷ್ಟವಾಗಿ ಅಪ್ರತಿಮವಾಗಿ ಅವರು ಹಿಡಿದಿಟ್ಟಿದ್ದಾರೆ. ಈ ವಸ್ತುಗಳನ್ನು ಕೇವಲ ಕಲಾತ್ಮಕವಾಗಿ ಮಾತ್ರವಲ್ಲದೆ ಸೂಕ್ಷ್ಮವಾಗಿ ಮತ್ತು ಗಂಭೀರವಾಗಿಯೂ ಚಿತ್ರಿಸಿದ್ದಾರೆ.
ಹದಿನೆಂಟು ಸಣ್ಣ ಕೃತಿಗಳು : ಇವುಗಳಲ್ಲಿ ಹನ್ನೊಂದು ನೀತಿಬೋಧಕ ಗ್ರಂಥಗಳಾದರೆ, ಉಳಿದೆಲ್ಲವೂ ಪ್ರಣಯವನ್ನು ಕುರಿತು ಬರೆದವುಗಳೇ ಆದರೂ ಒಂದು ಮಾತ್ರ ಯುದ್ಧವನ್ನು ಕುರಿತದ್ದಾಗಿದೆ.

1. ತಿರುಕ್ಕು¾ಳ್ (1330 ದ್ವಿಪಗಳು)
2. ನಾಲಡಿಯಾರ್ (400 ಚೌಪದಿಗಳು)
3. ನಾನ್ಮಣಿಕ್ಕಡಿಗಯ್ (ಪ್ರತಿಯೊಂದರಲ್ಲೂ 4 ಸೂಕ್ತಿಗಳರುವ 104 ಚೌಪದಿಗಳು)
4. ತಿರುಕಡಿಗಮ್ (ಪ್ರತಿಯೊಂದರಲ್ಲೂ 3 ಸೂಕ್ತಿಗಳರುವ 101 ಪದ್ಯಗಳು)
5. ತಿರುಪಂಚಮೂಲಮ್ (ಪ್ರತಿಯೊಂದರಲ್ಲೂ 5 ಸೂಕ್ತಿಗಳರುವ 98 ಚೌಪದಿಗಳು)
6. ಏಲಾದಿ (ಪ್ರತಿಯೊಂದರಲ್ಲೂ ಬುದ್ದಿವಂತಿಕೆಯ 6 ಅಂಶಗಳನ್ನುಳ್ಳ 82 ಚೌಪದಿಗಳು)
7. ಇನಿವಯ್‍ನಾ¾್ಪದು (ಸಂತೋಷಕರವಾದ ಸೂಕ್ತಿಗಳನ್ನುಳ್ಳ 40 ಚೌಪದಿಗಳು) 
8. ಇನ್ನಾ ನಾ¾್ಪದು (ಅಸಂತೋಷಕರವಾದ 40 ಚೌಪದಿಗಳು)
9. ಇನ್ನಿಲಯ್ ಅಥವಾ ಕಯ್‍ನ್ನಿಲಯ್.
10. ಮುದುಮೊ¿Âಕ್ಕಾಂಚಿ (ಪ್ರತಿಯೊಂದರಲ್ಲೂ 10 ಸೂಕ್ತಿಗಳರುವ 10 ಪ್ರಕರಣಗಳು)
11. ಆಚಾರಕ್ಕೋವಯ್ (ನಡುವಳಿಕೆಯ ನಿಯಮಗಳನ್ನು ವಿವರಿಸುವ 100 ಪದ್ಯಗಳು)
12. ಪ¿ಮೊ¿ು ನಾನೂರು (ಪ್ರತಿಯೊಂದರಲ್ಲೂ ಒಂದು ಗಾದೆಯಿರುವ 400 ಚೌಪದಿಗಳು)
13. ಕಳವ¿ುನಾ¿್ಪದು (ಯುದ್ಧವೊಂದನ್ನು ವರ್ಣಿಸುವ 400 ಪದ್ಯಗಳು)
14. ಕಾರ್‍ನಾ¾್ಪದು (ಒಂದು ಮಳೆಗಾಲದಲ್ಲಿ ನಾಯಕಿ ತನ್ನ ಇನಿಯನ ಹಿಂದಿರುಗುವಿಕೆಗಾಗಿ ಕಾಯುತ್ತಿರುವು
ದನ್ನು ಚಿತ್ರಿಸುವ 400 ಪದ್ಯಗಳು)
15. ಐನ್‍ತಿಣೈ ಐಂಬುದು (ಪ್ರಣಯದ ಐದು ಮುಖಗಳನ್ನು ಕುರಿತು 50 ಪದ್ಯಗಳು)
16. ಐನ್‍ತಿಣೈ ಎಜುಪದು (ಮೇಲಿನ ಸಂಗತಿಯ ಐದು ಮುಖಗಳನ್ನು ಕುರಿತ 70 ಪದ್ಯಗಳು.)
17. ತಿಣಮೊ¿ು ಐಂಬುದು (ಮೇಲಿನವುಗಳನ್ನು ಕುರಿತ 50 ಪದ್ಯಗಳು)
18. ತಿಣೈಮಾಲಯ್ ನೂಟ್ರೈಂಬುದು (ಮೇಲಿನವುಗಳ ಮೇಲೆ 150 ಪದ್ಯಗಳು)

ಇವುಗಳಲ್ಲಿ ಕಳವ¿ು ನಾ¿್ಪುದುವಿಶೇಷ ಗಮನವನ್ನು ಸೆಳೆಯುತ್ತದೆ. ಇಲ್ಲಿ ಚೋಳದೊರೆ ಕೊಂಚೆಂಕಣ್ಣನ್ ಮಾಡಿದ ಕ¿ಮಲಮ್ ಯುದ್ಧದ ಚಿತ್ರವಿದೆ. ಇದರ ಕರ್ತೃ ಈತನ ಶತ್ರುವಾದ ಚೇರರಾಜನ ಆಸ್ಥಾನ ಕವಿ. ಚೇರರಾಜ ಚೋಳ ದೊರೆಯಿಂದ ಸೋಲಿಸಲ್ಪಟ್ಟು ಸೆರೆಮನೆಯಲ್ಲಿರುತ್ತಾನೆ. ಕವಿ ತನ್ನ ಆಶ್ರಯದಾತನನ್ನು ಬಿಡಿಸಿಕೊಳ್ಳುವುದಕ್ಕೋಸ್ಕರ ಜಯಶೀಲನಾದ ರಾಜನ ಶಕ್ತಿ ಸಾಮಥ್ರ್ಯವನ್ನು ಹೊಗಳಿ ಬಂಧವಿಮುಕ್ತಿಗೆ ಆಶಿಸುತ್ತಾನೆ. ಆದರೆ ದುರದೃಷ್ಟವಶಾತ್ ಸೆರೆಯಲ್ಲಿದ್ದ ಪ್ರಭು ತನ್ನ ಬಿಡುಗಡೆಯ ಅಪ್ಪಣೆ ತಲಪುವುದರೊಳಗೆ ಅನೇಕ ದಿನಗಳ ಹಸಿವು ಮತ್ತು ತೀವ್ರ ಬಾಯಾರಿಕೆಯಿಂದಾಗಿ ಸಾಯುತ್ತಾನೆ.
ಬೇರೆ ಬೇರೆ ಜೈನ ಸಂನ್ಯಾಸಿಗಳಿಂದ ರಚಿತವಾದ ನಾಲಡಿಯಾರ್ ಕಾವ್ಯಸಂಗ್ರಹದಲ್ಲಿ 400 ಸೂಕ್ತಿಗಳನ್ನುಳ್ಳ ಚೌಪದಿಗಳಿವೆ. ಇದನ್ನು ಇಂಗ್ಲಿಷಿಗೆ ಅನುವಾದಿಸಿದ ರೆವರೆಂಡ್ ಜಿ.ಯು. ಪೋಪನ ಪ್ರಕಾರ ಈ ರಚನೆಗಳಲ್ಲಿ ಉಪದೇಶದ ಸ್ವೋಪಜ್ಞತೆಗಿಂತ ಮಿಗಿಲಾಗಿ ಇಡೀ ತಮಿಳು ಮಹಾನಜನತೆಯ ಅಷ್ಟೇಕೆ ಇಡೀ ಭಾರತದ ಜನಸಾಮಾನ್ಯರ ಆಲೋಚನೆ ಮತ್ತು ಭಾವನೆಗಳನ್ನು ಪ್ರತಿಫಲಿಸುವ ಒಂದು ವಿಶಿಷ್ಟವಾದ ಸಂಕ್ಷಿಪ್ತತೆ ಇದೆ. ಸಮರ್ಥವಾದ ಶೈಲಿ ಇದೆ.

ಜಗತ್ತಿನ ಅನೇಕ ಪ್ರಮುಖ ಭಾಷೆಗಳಿಗೆ ಅನುವಾದವಾಗಿರುವ ತಿರುಕ್ಕು¾ಳ್ ಪ್ರಪಂಚದ ಒಂದು ಅತ್ಯುತ್ತಮ ಧರ್ಮಶಾಸ್ತ್ರ ಗ್ರಂಥವೆಂದು ಹೆಸರುವಾಸಿ ಹೊಂದಿದೆ. ಜರ್ಮನ್ ತತ್ತ್ವಜ್ಞಾನಿ ಹಾಗೂ ವಿಜ್ಞಾನಿ ಡಾ. ಆಲ್ಬರ್ಟ್ ಶ್ವೈಟ್ಜರ್‍ನ ಪ್ರಕಾರ ಇಂಥ ಉನ್ನತ ಸೂಕ್ತಿಗಳನ್ನು ಹೊಂದಿರುವ ಒಂದು ಪುಸ್ತಕ ಜಗತ್ತಿನ ಸಾಹಿತ್ಯದಲ್ಲಿ ಸಿಗುವುದು ತುಂಬ ಅಪರೂಪ. ಈ ಬೃಹತ್ ಪುಸ್ತಕದ ಕರ್ತೃ ತಿರುವಳ್ಳುವರ್ (ನೋಡಿ- ತಿರುವಳ್ಳುವರ್) ಎಂಬ ಒಬ್ಬ ಸಂನ್ಯಾಸಿ. ಈ ಹದಿನೆಂಟು ಶತಮಾನಗಳಲ್ಲಿ ಈ ಪುಸ್ತಕ ಜಗತ್ತಿನ ಎಲ್ಲ ಮತಧರ್ಮಗಳ ಗುರುಗಳಿಂದ, ಮಹಾತ್ಮರುಗಳಿಂದ ಪ್ರಶಂಸಿಸಲ್ಪಟ್ಟಿದೆ. ಇದನ್ನು ಕುರಿತು ಹನ್ನೆರಡು ಪ್ರಾಚೀನ ವ್ಯಾಖ್ಯಾನಗಳೂ ಅನೇಕ ಆಧುನಿಕ ವ್ಯಾಖ್ಯಾನಗಳೂ ಬಂದಿವೆ. ಪುಸ್ತಕದ ಮೂರು ವಿಭಾಗಗಳಲ್ಲಿ 1330 ದ್ವಿಪದಿಗಳಿವೆ. ಮೊದಲನೆಯ ಭಾಗ ಗೃಹಸ್ಥನ ಮತ್ತು ತಪಸ್ವಿಯ ಚಾರಿತ್ರ್ಯವನ್ನು ಕುರಿತದ್ದಾಗಿದೆ, ಎರಡನೆಯ ವಿಭಾಗ ಆಳುವವರ, ಮಂತ್ರಿಗಳ ಮತ್ತು ಇತರ ಆಡಳಿತಗಾರರ ವಿಚಾರ ಹಾಗೂ ಪೌರತ್ವ ಇತ್ಯಾದಿಗಳನ್ನು ಕುರಿತದ್ದಾಗಿದೆ, ಮೂರನೆಯ ವಿಭಾಗ ಗುಪ್ತಪ್ರಣಯ ಮತ್ತು ವಿವಾಹ ಜೀವನಕ್ಕೆ ಸಂಬಂಧಿಸಿದುದಾಗಿದೆ. ಗ್ರಂಥಕರ್ತೃ ಪ್ರತಿಯೊಂದನ್ನೂ ಉನ್ನತವಾದ ಮತ್ತು ಶ್ರೇಷ್ಠವಾದ ದೃಷ್ಟಿಯಿಂದ ವಿವರಿಸುತ್ತಾನೆ.

ಯಮಳ ಮಹಾಕಾವ್ಯಗಳು : ಶಿಲಪ್ಪದಿಕಾರಮ್ ಮತ್ತು ಮಣಿಮೇ ಕಲಯಗಳನ್ನು ಕ್ರಿ.ಶ. ಎರಡು ಅಥವಾ ಮೂರನೆಯ ಶತಮಾನಕ್ಕೆ ಸೇರಿದವೆಂದು ಸಾಮಾನ್ಯವಾಗಿ ಹೇಳುವುದುಂಟು. ಮೊದಲನೆಯದು ಕಣ್ಣಗಿ ಮತ್ತು ಕೋವಲನ್ ಕಥೆಗೆ ಸಂಬಂಧಿಸಿದ್ದಾದರೆ ಎರಡನೆಯದು ಕೋವಲನನ ಮಗಳು ಮಣಿಮೇಕಲಯ್ ಕಥೆಗೆ ಸಂಬಂಧಿಸಿದ್ದು. ಜೊತೆಗೆ ಈ ಎರಡೂ ಮಹಾಕಾವ್ಯಗಳ ಕರ್ತೃಗಳು ಸಮಕಾಲೀನರೆಂದು ಪರಿಗಣಿಸಲಾಗಿದೆ. ಆದುದರಿಂದ ಇವೆರಡನ್ನೂ ಯಮಳ ಮಹಾಕಾವ್ಯಗಳೆಂದು ಕರೆಯಲಾಗುತ್ತಿದೆ. ಇವೆರಡೂ ತಮಿಳಿನ ಪ್ರಾಚೀನ ಮಹಾಕಾವ್ಯಗಳು.

ಶಿಲಪ್ಪದಿಕಾರಮ್‍ನ ಕರ್ತೃ ಇಳಂಗೋ ಅಡಿಗಳ್ (ನೋಡಿ- ಇಳಂಗೋ-ಅಡಿಗಳ್) ಸಾಮಾನ್ಯನಲ್ಲ. ಆತ ಚೇರ ದೊರೆಯೊಬ್ಬನ ಮಗ. ಚಿಕ್ಕಂದಿನಲ್ಲಿ ಒಂದು ದಿನ ಅಣ್ಣನೊಂದಿಗೆ ತಂದೆಯ ಆಸ್ಥಾನಕ್ಕೆ ಹೋದಾಗ, ಒಬ್ಬ ಜ್ಯೋತಿಷಿ ಇವನು ಮುಂದೆ ತನ್ನ ತಂದೆಯ ಅನಂತರ ಚೇರ ದೇಶದ ಪಟ್ಟಕ್ಕೆ ಬರುತ್ತಾನೆ ಎಂದು ಭವಿಷ್ಯ ನುಡಿದ. ಇಳಂಗೋ ತನ್ನ ಅಣ್ಣನಿಗೂ ಸಿಂಹಾಸನಕ್ಕೂ ಮಧ್ಯೆ ನಿಲ್ಲಲು ಇಷ್ಟಪಡದೆ ತಕ್ಷಣವೇ ವಿರಾಗಿಯಾಗಿ ಅರಮನೆಯನ್ನು ತ್ಯಜಿಸಿ ನಗರದ ಪೂರ್ವ ತುದಿಯಲ್ಲಿದ್ದ ಒಂದು ಆಶ್ರಮ ಸೇರಿ ತಪಸ್ವಿಯಾದ : ಮುಂದೆ ಒಬ್ಬ ದೊಡ್ಡ ತಾತ್ತ್ವಿಕ ಕವಿಯಗಿ ಬೃಹತ್ ಮಹಾಕಾವ್ಯವನ್ನು ಬರೆದ. ಶಿಲಂಬು ಎಂದರೆ ಕಾಲಂದಿಗೆ ಎಂದರ್ಥ. ಕಣ್ಣಗಿ ಮತ್ತು ಅವಳ ಕಾಲಂದಿಗೆ ಸುತ್ತ ನಡೆಯುವ ಭಾವನಾತ್ಮಕ ಕಥೆಯನ್ನು ಶಿಲಪ್ಪದಿಕಾರಮ್ ವರ್ಣಿಸುತ್ತದೆ. ಈ ಮಹಾಕಾವ್ಯ ಮತ್ತು ಈತನ ಸೋದರ ಕಟ್ಟಿಸಿದ ಚೇರನ್ ಚೆಂಕುಟ್ಟುವನ್ ದೇವಾಲಯ-ಇವು ತಮಿಳುನಾಡು ಮತ್ತು ಶ್ರೀಲಂಕಾಗಳಲ್ಲಿ ಕಣ್ಣಗಿಯನ್ನು ಪಾತಿವ್ರತ್ಯ ದೇವತೆಯಗಿ ಪೂಜಿಸಲ್ಪಡುವ ಹಾಗೆ ಮಾಡಿವೆ. ಸಾಹಿತ್ಯ ಕೃತಿಯಾಗಿ ಈ ಮಹಾಕಾವ್ಯ ಜೀವನದ ಪ್ರೇಮ, ವಾತ್ಸಲ್ಯ ಮುಂತಾದ ಹಾರ್ದಿಕ ಸಂಗತಿಗಳನ್ನು ಕುರಿತು ಹಾಗೂ ವಿಧಿಯ ನೈಷ್ಠುರ್ಯವನ್ನು ಕುರಿತು ಒತ್ತಿ ಹೇಳುತ್ತದೆ. ನಾಟಕೀಯ ಅಭಿವ್ಯಕ್ತಿ ಕೊಡಲು ಇಲ್ಲಿ ಅನೇಕ ತರಹದ ಛಂದಸ್ಸುಗಳನ್ನು ಬಳಸಿರುವುದು ಒಂದು ಗಮನಾರ್ಹ ಸಂಗತಿ. ಲಲಿತ ಕಲೆಗಳಲ್ಲಿ ಅದರಲ್ಲೂ ಸಂಗೀತ ನೃತ್ಯ ಮತ್ತು ಜನಪದ ಗೀತೆಗಳ ಅಭ್ಯಾಸದಲ್ಲಿ ಗ್ರಂಥಕರ್ತೃವಿಗಿದ್ದ ಅಪಾರ ಜ್ಞಾನ ಮತ್ತು ಆಸಕ್ತಿ ಇಲ್ಲಿ ಯುಕ್ತಾಭಿವ್ಯಕ್ತಿ ಪಡೆದಿವೆ. 

ಮಣಿಮೇಕಲಯ್ ಮಹಾಕಾವ್ಯದ ನಾಯಕಿ ಕೋವಲನ್ ಮತ್ತು ಅವನ ದಾಸಿ ಮಾಧವಿಯ ಮಗಳು. ಕಾವ್ಯದ ಕರ್ತೃ ಚಾತ್ತನಾರ್ ಒಬ್ಬ ತೀವ್ರ ಬೌಧ್ದವಾದಿಯಾದ್ದರಿಂದ ಕಾವ್ಯದಲ್ಲಿ ಬೌಧ್ದ ಸಮಯದ ವಿಸ್ತøತ ವಿಶ್ಲೇಷಣೆಯನ್ನು ಕಾಣಬಹುದು. ನಾಯಕಿ ಬೌದ್ಧ ಸಂನ್ಯಾಸಿನಿಯಾಗಿ ಪರಿವರ್ತಿತಳಾದ ಮೇಲೆ ದೇಶದ ನಾನಾ ಭಾಗಗಳಲ್ಲಿ ಸಂಚರಿಸಿ ಹಸಿವು ಮತ್ತು ರೋಗಗಳಿಂದ ಜನರನ್ನು ವಿಮುಕ್ತಗೊಳಿಸುತ್ತಾಳೆ.

ಅನಂತರದ ಮಹಾಕಾವ್ಯಗಳ ನಾಯಕ ಮತ್ತು ನಾಯಿಕೆಯರು ರಾಜರಾಣಿಯರಾಗಿದ್ದಾರೆ ಪ್ರಾಚೀನ ಮಹಾಕಾವ್ಯಗಳಲ್ಲಿ ಜನಸಾಮಾನ್ಯರೇ ನಾಯಕ ಮತ್ತು ನಾಯಿಕೆಯರು. ಸಾಮಾನ್ಯವಾಗಿ ದಾಸಿಯರನ್ನು ಸಾಹಿತ್ಯ ಕೃತಿಗಳಲ್ಲಿ ಬಹಳ ತಿರಸ್ಕಾರದಿಂದ ಕಾಣಲಾಗುತ್ತಿತ್ತು. ಆದರೆ ಶಿಲಪ್ಪದಿಕಾರಮ್‍ನ ದಾಸಿ ಮಾಧವಿಯನ್ನು ಪಾವಿತ್ರ್ಯದಲ್ಲಿ ಮತ್ತು ಸೌಶೀಲ್ಯದಲ್ಲಿ ನಾಯಕಿ ಕಣಗಿಗೆ ಎರಡನೆಯವಳಾಗಿ ಪರಿಗಣಿಸಲಾಗಿದೆ. ದಾಸಿ ಮನೆತನದಲ್ಲಿ ಹುಟ್ಟಿದ ಹರೆಯದ ಹೆಣ್ಣೊಬ್ಬಳು ವಿರಕ್ತಳಾಗಿ ಒಬ್ಬ ದೊಡ್ಡ ಪ್ರವಾದಿಯಾಗಿ ಆಶ್ರಯದಾತಳಾಗಿ ಇರುವುದು ಮಣಿಮೇಕಲಯ್ ನಲ್ಲಿ ಕಂಡುಬರುತ್ತದೆ.

ಭಕ್ತಿಗೀತೆಗಳು: ಕ್ರಿ.ಶ. 600ರಿಂದ 900ನೆಯ ಕಾಲವನ್ನು ತಮಿಳು ಸಾಹಿತ್ಯದ ಭಕ್ತಿಗೀತೆಗಳ ಯುಗ ಎಂದು ಕರೆಯಲಾಗುತ್ತದೆ. ನಾಯನಾರರು ಎಂದು ಕರೆಯಲ್ಪಡುವ ನಾಲ್ಕು ಜನ ಶೈವಭಕ್ತರು ಮತ್ತು ಆಳ್ವಾರ್‍ಗಳು (ನೋಡಿ- ಆಳ್ವಾರ್‍ಗಳು) ಎಂದು ಕರೆಯಲ್ಪಡುವ ಹನ್ನೆರಡು ಜನ ವೈಷ್ಣವ ಭಕ್ತರು ಮುಖ್ಯವಾಗಿ ಸ್ತೋತ್ರ ಸಾಹಿತ್ಯಕ್ಕೆ ವಿಪುಲ ಕಾಣಿಕೆ ನೀಡಿದ್ದಾರೆ. ಜೈನ ಮತ್ತು ಬೌದ್ಧ ಧರ್ಮಗಳ ಪ್ರಭಾವ ಅತಿಯಾಗಿದ್ದಾಗ ಅವೆರಡನ್ನೂ ಎದುರಿಸುವುದೇ ಮುಖ್ಯ ಉದ್ದೇಶವಾಗಿ ಇವರ ಕೃತಿಗಳು ಹುಟ್ಟಿಕೊಂಡವು. ಜೈನರು ಮತ್ತು ಬೌದ್ಧರು ಧಾರ್ಮಿಕ ವಲಯದಲ್ಲಿ ಏನನ್ನು ಕಳೆದುಕೊಂಡರೋ ಅದನ್ನು ಅವರು ವ್ಯಾಕರಣ ಮತ್ತು ಧರ್ಮಶಾಸ್ತ್ರ ಕ್ಷೇತ್ರಗಳಲ್ಲಿ ಪಡೆದುಕೊಂಡರು. ಆ ಕಾಲದ ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ತಮಿಳುನಾಡಿನ ಹಳೆಯ ರಾಜವಂಶಗಳ ಪತನ ಮತ್ತು ಸಂಸ್ಕøತ ಸಾಹಿತ್ಯಕ್ಕೆ ಪ್ರಬಲ ಆಶ್ರಯದಾತರಾಗಿದ್ದ ಪಲ್ಲವರು ತುಳುನಾಡನ್ನು ಆಳಲು ಬಂದದ್ದು. ಇದರ ಪರಿಣಾಮವಾಗಿ ಅನೇಕ ಸಂಸ್ಕøತ ಕೃತಿಗಳು ತಮಿಳಿಗೆ ಅನುವಾದವಾಗಿ ಇಲ್ಲವೆ ಭಾವಾನುವಾದವಾಗಿ ಬಂದವು ಮತ್ತು ತಮಿಳು ಸಾಹಿತ್ಯದಲ್ಲಿ ಸಂಸ್ಕøತ ಕೃತಿಗಳ ಮಿಶ್ರಣ ಉತ್ತೇಜನ ಪಡೆಯಿತು.
ಮೂವರು ಶೈವ ಸಾಹಿತಿಗಳಾದ ತಿರುನಾವುಕ್ಕರಶ್ (ನೋಡಿ- ಅಪ್ಪರ್) ತಿರುಜ್ಞಾನ ಸಂಬಂಧರ್ ಮತ್ತು ಸಂಬಂಧರ್ ಇವರ ಸ್ತೋತ್ರಗೀತೆಗಳು ತೇವಾರಂ (ನೋಡಿ- ತೇವಾರಂ) ಎಂದು ಕರೆಯಲ್ಪಟ್ಟವು. ಮಾಣಿಕ್ಯ ವಾಚಕರ್ ಅವರ ಗೀತೆಗಳು ತಿರುವಾಚಕಮ್ ಎನ್ನಿಸಿದವು. ಹನ್ನೆರಡು ಜನ ವೈಷ್ಣವ ಸಂನ್ಯಾಸಿಗಳಲ್ಲಿ ಆಂಡಾಳ್ (ನೋಡಿ- ಆಂಡಾಳ್) ಮತ್ತು ನಮ್ಮಾಳ್ವಾರ್ ತುಂಬ ಪ್ರಮುಖರಾದವರು. ಹನ್ನೆರಡು ಜನ ಆಳ್ವಾರರ ಸ್ತೋತ್ರಗೀತೆಗಳು ನಾಲಾಯಿರ ದಿವ್ಯಪ್ರಬಂಧಂ (ನಾಲ್ಲು ಸಾವಿರ ಶ್ರೇಷ್ಠ ಸ್ತೋತ್ರಗಳು) ಎಂದು ಹೆಸರಾದವು. ಇವರಲ್ಲಿ ಬಹಳಷ್ಟು ಜನ ಸಂನ್ಯಾಸಿಗಳು ದೇಶದ ಉದ್ದಗಲದಲ್ಲಿ ಸ್ಥಳದಿಂದ ಸ್ಥಳಕ್ಕೆ ಸಂಚರಿಸುತ್ತ ದೇವಾಲಯದಿಂದ ದೇವಾಲಯಕ್ಕೆ ಹೋಗುತ್ತ ಅಲ್ಲಿನ ಸುತ್ತ ಮುತ್ತಲ ಸ್ಥಳೀಯ ದೇವತೆಗಳ ಮೇಲೆ ಆಧ್ಯಾತ್ಮಿಕ ಭಕ್ತಿಗೀತೆಗಳನ್ನು ಹೆಣೆದರು. ಇವು ಆಳವಾದ ಭಾವನೆ ಮತ್ತು ಅಭಿವ್ಯಕ್ತಿಯ ಶ್ರೀಮಂತಿಕೆಯಿಂದ ವಿದ್ವಾಂಸರನ್ನು ಆಕರ್ಷಿಸಿದಲ್ಲದೆ ಇಂದಿಗೂ ತಮಿಳು ಜನತೆಗೆ ಮನೆಯ ದಿನನಿತ್ಯದ ಪ್ರಾರ್ಥನೆಯಾಗಿ ಉಳಿದಿವೆ.

ಮಧ್ಯಯುಗದ ಮಹಾಕಾವ್ಯಗಳು (ಕ್ರಿ.ಶ. 900ರಿಂದ 1200): ಕೊಂಗುವೇಳಿರ್ ಎಂಬಾತ ಉದಯಣನ್ ಮತ್ತು ವಾಸವದತ್ತೆಯರ ಕಥೆಯನ್ನು ಅಗವಲ ಛಂದಸ್ಸಿನ (ಸರಳ ರಗಳೆ) ಪೆರುಂಗತೈ ಎಂಬ ಮಹಾಕಾವ್ಯವಾಗಿ ರಚಿಸಿದ. ಮತ್ತೊಬ್ಬ ಜೈನ ಸಂನ್ಯಾಸಿ ತಿರುತ್ತಕ್ಕ ದೇವರ್ ಎಂಬಾಗ ಜೀವಗ ಚಿಂತಾಮಣಿ ಎಂಬ ಮಹಾಕಾವ್ಯವನ್ನು ವಿರುತ್ತಂ ಎಂಬ ಹೊಸ ಛಂದಸ್ಸಿನಲ್ಲಿ ಬರೆದು ಅದನ್ನು ಹೆಚ್ಚು ಜನಪ್ರಿಯವನ್ನಾಗಿ ಮಾಡಿದ. ತೋಲಾ ಮೋ¾Éತ್ತೇವರ್ ಎಂಬಾತನಿಂದ ಬರೆಯಲ್ಪಟ್ಟ ಮತ್ತೊಂದು ಜೈನ ಮಹಾಕಾವ್ಯ ಚೂಳಾಮಣಿ ಅಷ್ಟೊಂದು ಜನಪ್ರಿಯತೆಯನ್ನು ಪಡೆಯದಿದ್ದರೂ ತನ್ನ ಸಾಹಿತ್ಯಿಕ ಉತ್ಕøಷ್ಟತೆಯಿಂದಾಗಿ ಸಾಕಷ್ಟು ಪ್ರಶಂಸಿಸಲ್ಪಟ್ಟಿದೆ.

ವಳೈಯಾಪತಿ, ಕುಂಡಲಕೇಶಿ, ನೀಲಕೇಶ, ಯಶೋದರಕಾವಿಯಮ್, ನಾಗಕುಮಾರಕಾವಿಯಮ್ ಮತ್ತು ಉದಯಣನ ಕತಯ್‍ಗಳು-ಈ ಕಾಲದ ಇತರ ಜೈನ ಮತ್ತು ಬೌದ್ಧಮಹಾಕಾವ್ಯಗಳು (ಈ ಕೃತಿಗಳು ಆ ಎರಡು ಧರ್ಮಗಳ ಪ್ರಚಾರವನ್ನೇ ಮೂಲ ಗುರಿಯಾಗುಳ್ಳವು). ಇವುಗಳಲ್ಲಿ ಕೆಲವು ಹಾಳಾಗಿವೆ. ಇನ್ನು ಕೆಲವು ತ್ರುಟಿತವಾಗಿವೆ.

ಚೋಳದೊರೆ ಕುಲೋತ್ತುಂಗನ ಮಂತ್ರಿಯಾದ ಚೆಕ್ಕಿಲಾರ್ ಬರೆದ ಪೆರಿಯ ಪುರಾಣ ಅರವತ್ತುಮೂರು ಜನ ಶೈವ ಸಂನ್ಯಾಸಿಗಳನ್ನು ಕುರಿತ ಒಂದು ಮಹಾಕಾವ್ಯ. ಸರಳ ಮತ್ತು ಶುದ್ಧ ಪದಪುಂಜಗಳನ್ನುಳ, ಮಾಗಿದ ಧಾರ್ಮಿಕ ಭಾವನೆಗಳನ್ನುಳ್ಳ, ಕಾವ್ಯ ಶ್ರೀಮಂತಿಕೆಯಿಂದ ಕೂಡಿದ ಇದು ಉತ್ತಮ ದರ್ಜೆಯ ಗಮನಾರ್ಹವಾದ ಕಾವ್ಯ. ಆ ಕಾಲದ ತಮಿಳು ದೇಶದ ನಾನಾ ಬುಡಕಟ್ಟುಗಳ ಮತ್ತು ವರ್ಗಗಳ ಪದ್ಧತಿಗಳು. ನಡೆನುಡಿಗಳು ಮತ್ತು ಆಚರಣೆಗಳ ಮಾಹಿತಿಗೆ ಇದೊಂದು ವಿಶ್ವಕೋಶ.
ಮಹಾಕವಿ ಕಂಬನಿಂದ ರಚಿತವಾದ ಕಂಬರಾಮಾಯಣಮ್ ಒಂದು ಶಾಶ್ವತ ತಮಿಳು ಮಹಾಕಾವ್ಯ. ಸಂಸ್ಕøತ ವಾಲ್ಮೀಕಿ ರಾಮಾಯಣದ ರೂಪಾಚಿತರವೇ ಆಗಿದ್ದರೂ ಪಾತ್ರ ಚಿತ್ರಣದಲ್ಲಿ, ಕಲ್ಪನಾಶಕ್ತಿಯಲ್ಲಿ ಇದು ತನ್ನದೇ ಆದ ಸ್ವಂತಿಕೆಯನ್ನು ಹೊಂದಿದೆ. ಭಾವನೆಗಳು ಮತ್ತು ಅಭಿವ್ಯಕ್ತಿ ವಿಧಾನ ಜೊತೆಜೊತೆಯಾಗಿ ಹೋಗುವುದನ್ನು ನೋಡಿದರೆ ಕವಿ ತಮಿಳು ಭಾಷೆಯಲ್ಲಿ ಎಂಥ ಹಿಡಿತ ಸಾಧಿಸಿದ್ದ ಎಂಬುದು ಅರ್ಥವಾಗುತ್ತದೆ. ವರ್ಣನೆ ಮಾಡುವಲ್ಲಿ ಕಥೆ ಹೇಳುವಲ್ಲಿ. ನಾಟಕೀಯ ಸಂದರ್ಭಗಳನ್ನು ಚಿತ್ರಿಸುವಾಗ ಕೃತಿಕಾರ ತೋರಿರುವ ಸಾಮಥ್ರ್ಯ ಆಶ್ವರ್ಯಜನಕವಾದುದು. ಕವಿ ತನ್ನಿಂದ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಕಾವ್ಯವನ್ನು ಮಧುರವಾಗಿಯೂ ಸುಂದರವಾಗಿಯೂ ಮಾಡಿದ್ದಾನೆ. ಈ ಮಹಾಕವಿ ತಮಿಳು ಭಾಷೆಯ ಎಲ್ಲ ಕಾವ್ಯಸಿದ್ಧತೆಗಳನ್ನು ಯುಕ್ತವಾಗಿ ಬಳಸಿಕೊಂಡುಬಿಟ್ಟಿದ್ದಾನೆ.

ಜಯಕೊಂಡಾರ್ನ ರಣಗೀತೆ ಕಲಿಂಗತ್ತುಪರಣಿ ತನ್ನಲಯ, ಶೈಲಿ, ಉಪಮೆ ಮತ್ತು ಉತ್ಪ್ರೇಕ್ಷೆಗಳಿಂದ ಪ್ರಸಿದ್ಧವಾಗಿದೆ. ಚಮತ್ಕಾರಗಳು ಈ ಕೃತಿಗಲ್ಲಿ ಸಾಕಷ್ಟಿವೆ. ಚೋಳ ದೇಶದ ದೊರೆ ಒಂದನೆಯ ಕುಲೋತ್ತುಂಗ ಕಳಿಂಗ ದೇಶವನ್ನು ಗೆದ್ದುದರ ವಿವರಣೆ ಇದರ ವಸ್ತು.

ಯಾವುದೇ ಮಹಾಕಾವ್ಯವನ್ನು ರಚಿಸದಿದ್ದರೂ ಶ್ರೀಮಂತ ವಿವೇಚನೆಗಳಿಂದ ಕೂಡಿದ ಚಿಕ್ಕ ನೀತಿಶಾಸ್ತ್ರಗಳನ್ನು ರಚಿಸಿ ಅತ್ಯಂತ ಜನಪ್ರಿಯಳಾದ ದೊಡ್ಡ ಕವಯಿತ್ರಿಯೊಬ್ಬಳು ಆ ಕಾಲದಲ್ಲಿ ಇದ್ದಳು. ಅವಳು ತಮಿಳುನಾಡಿನಲ್ಲಿ ಇಂದಿಗೂ ಅವ್ವೆಯಾರ್ (ನೋಡಿ- ಅವ್ವೆಯಾರ್) ಎಂದು ಹೆಸರಾಗಿದ್ದಾಳೆ. ವಯಸ್ಸಾದ ಶ್ರೇಷ್ಠ ಹೆಂಗಸು-ಎಂದು ಆಕೆಯ ಹೆಸರಿನ ಅರ್ಥ. ಈ ಹೆಸರಿನ ಅನೇಕ ಜನ ಕವಯಿತ್ರಿಯರಿದ್ದಾರೆ. ಪ್ರಾಚೀನ ಸಾಹಿತ್ಯ ಸಂಪ್ರದಾಯದ ಪ್ರಕಾರ ಸಂಗಂ ಕಾಲದಲ್ಲಿ ಒಬ್ಬ ಅವ್ವೆಯಾರ್ ಎಂಬವಳಿದ್ದಳೆಂದೂ ಆಕೆ 59 ಕವನಗಳನ್ನು ಬರೆದಿದ್ದಳೆಂದೂ ತಿಳಿದುಬರುತ್ತದೆ. ಅವಳು ದೊರೆಗಳ ಮತ್ತು ಪಾಳೆಯಗಾರರ ಗೌರವ ಮತ್ತು ಆಶ್ರಯ ಪಡೆದಿದ್ದಳು. ಮಧ್ಯಯುಗದಲ್ಲಿ ಬದುಕಿದ್ದ ಅವ್ವೆಯಾರ್ ಅಪಾರ ಜನಪ್ರಿಯ ವ್ಯಕ್ತಿಯಾಗಿದ್ದಳಲ್ಲದೆ ಅವಳನ್ನು ಕುರಿತಂತೆ ಸಿಗುವ ಅನೇಕ ಐತಿಹ್ಯಗಳು ಅವಳ ವ್ಯಕ್ತಿತ್ವದ ಔನತ್ಯವನ್ನು ತಿಳಿಸುತ್ತವೆ. ದೇಶದ ಎಲ್ಲ ತರಹದ ಜನರೊಂದಿಗೆ ಆಕೆಗೆ ಸ್ನೇಹವಿತ್ತು. ಚಾತುರ್ಯ ಮತ್ತು ವಿವೇಚನೆಗಳನ್ನುಳ್ಳ ಅನೇಕ ತುಣುಕು ಪದ್ಯಗಳನ್ನು ಬರೆದಿದ್ದಾಳಾದರೂ ಅತ್ತಿಚೂಡಿ ಕೊನ್ರೈವೇಯಿಂದನ್, ಮೂದುರಯ್ ಮತ್ತು ನಲ್‍ವೆ¿Âು ಎಂಬವು ಆಕೆಯ ಪ್ರಮುಖ ಕೃತಿಗಳು. ಈ ಕೃತಿಗಳಲ್ಲಿ ನೀತಿ ಮತ್ತು ವಿವೇಕಗಳು ಅಡಕವಾಗಿ ವಿವರಿಸಲ್ಪಟ್ಟವೆ.

ವ್ಯಾಖ್ಯಾನಕಾರರ ಕಾಲ ( ಕ್ರಿ.ಶ.1200-1750): ಈ ಕಾಲದಲ್ಲಿ ಅನೇಕ ಜನ ದ್ವಿತೀಯ ದರ್ಜೆಯ ಕವಿಗಳು ಶೈವ ಮತ್ತು ವೈಷ್ಣವ ಧರ್ಮಗಳ ಮುಂದಾಳುಗಳಾಗಿದ್ದು ಧಾರ್ಮಿಕ ವಸ್ತುಗಳನ್ನೆ ಇಟ್ಟುಕೊಂಡು ಅನೇಕ ಕೃತಿಗಳನ್ನು ರಚಿಸಿದರು. ಇವರು ಅನೇಕ ದೇವರುಗಳ ಮೇಲೆ ಪುರಾಣಗಳನ್ನು ಬರೆದರಲ್ಲದೆ ಸಂಸ್ಕøತದಿಂದ ಪುರಾಣಗಳನ್ನು ಅನುವಾದ ಮಾಡಿದ್ದಾರೆ, ತಮಿಳಿಗೆ ಅಳವಡಿಸಿದ್ದಾರೆ.

ಇದೇ ಕಾಲದಲ್ಲಿ ಅನೇಕ ಜನ ವ್ಯಾಖ್ಯಾನಕಾರರು ಪ್ರಾಚೀನ ಕಾಲದ ಸಾಹಿತ್ಯ ಕೃತಿಗಳನ್ನು, ವ್ಯಾಕರಣ ಗ್ರಂಥಗಳನ್ನು ಜನಪ್ರಿಯತೆಗೊಳಿಸಲು ಯತ್ನಿಸಿದರು. ಶಿಲಪದಿಕಾರಮ್ ಮಹಾಕಾವ್ಯದ ಮೇಲೆ ಅಡಿಯಾರ್ಕುನಲ್ಲಾರ್ ಬರೆದ ವ್ಯಾಖ್ಯನವನ್ನು ಇಲ್ಲಿ ವಿಶೇಷವಾಗಿ ನೆನೆಯಬೇಕು. ಅಲ್ಲಿ ವಿಷಯವನ್ನು ಸ್ಪಷ್ಟ ಪಡಿಸಲು ಆತ ಹಳೆಯ ಕಾಲದ ಕಲೆ ಮತ್ತು ಸಂಸ್ಕøತಿಗಳಿಗೆ ಸಂಬಂಧಪಟ್ಟ ಹಾಗೆ ಆಧಾರಸಹಿತವಾದ, ಮೌಲಿಕವಾದ ಮಾಹಿತಿಗಳನ್ನೂ ಕೊಡುತ್ತಾನೆ. ತಿರುಕು¾ಳ್ ಅನ್ನು ಕುರಿತಂತೆ ಹತ್ತು ಹಳೆಯ ವ್ಯಾಖ್ಯಾನಗಳಿವೆ. ನಾಲ್ಕು ಸಾವಿರ ಶ್ರೇಷ್ಠ ವೈಷ್ಣವ ಸ್ತೋತ್ರಗೀತೆಗಳ ಮೇಲೆ ಹುಟ್ಟಿರುವ ವ್ಯಾಖ್ಯಾನಗಳಂತೂ ತುಂಬ ಉಪಯುಕ್ತವಾಗಿವೆ.

ಅರುಣಗಿರಿನಾದರ್ (ನೋಡಿ- ಅರುಣಗಿರಿನಾಥ) ಸುಬ್ರಹ್ಮಣ್ಯನ ಭಕ್ತ. ಆತನ ಭಕ್ತಿಗಳು ತಿರುಪ್ಪಗಳ್ ಎಂದು ಹೆಸರಾಗಿವೆ. ಅವು ತಮ್ಮ ಗೇಯ ಗುಣಗಳಿಂದ ಗಮನಾರ್ಹವಾದವು. ಆತನ ಸಮಕಾಲೀನ ವಿಲ್ಲಿಪುತ್ತೂರಾರ್ ತಮಿಳಿನಲ್ಲಿ ಭಾರತವನ್ನು ಬರೆದ. ಇವನ ಅನಂತರ ಬಂದ ನಲ್ಲಪಿಳ್ಳೈ ಸುಮಾರು ಹತ್ತು ಸಾವಿರ ಪದ್ಯಗಳನ್ನು ಸೇರಿಸಿ ಅದನ್ನು ವಿಸ್ತøತಗೊಳಿಸಿದ.
ಧರ್ಮ ಮತ್ತು ತತ್ತ್ವಜ್ಞಾನಗಳ ಜೊತೆಗೆ ಶೈವ ಮತ್ತು ವೀರಶೈವ ಮಠಗಳೆಂದು ಕರೆಯಲ್ಪಡುವ ಆಶ್ರಮಗಳು ತಮಿಳು ಅಧ್ಯಯನಕ್ಕೆ ಕೇಂದ್ರಗಳಾದವು. ಈ ಮಠದ ಪಂಡಿತರು ಪೈಪೋಟಿಯಿಂದ ಹೊಸ ಕೃತಿಗಳನ್ನು ರಚಿಸಿದರು; ಇವುಗಳಲ್ಲಿ ಸ್ವಂತಿಕೆ ಕಡಿಮೆ; ಪರಸ್ಪರ ಅನುಕರಣವೇ ಹೆಚ್ಚು; ಶಾಶ್ವತ ಕೃತಿಗಳನ್ನು ನಮಗೆ ಬಿಟ್ಟುಹೋದ ಕುಮರಗುರುಪರರ್ ಮತ್ತು ಶಿವಪ್ರಕಾಶರ್ ಇದಕ್ಕೆ ಅಪವಾದವಾಗಿ ನಿಲ್ಲುತ್ತಾರೆ. ಇವರಲ್ಲಿ ಮೊದಲನೆಯವ ಹದಿನೇಳನೆಯ ಶತಮಾನದಲ್ಲಿದ್ದು ಶೈವ ತಪಸ್ವಿಯಾಗಿ ಧರ್ಮಪುರಮ್ ಮಠದಲ್ಲಿ ದೀಕ್ಷೆ ಪಡೆದ. ಈತ ಉತ್ತರ ಭಾರತಕ್ಕೆ ಹೋಗಿ ಮೊಗಲ್ ಚಕ್ರವರ್ತಿ ಅಕ್ಬರ್‍ನನ್ನು ಸಂದರ್ಶಿಸಿ ವಾರಾಣಸಿಯಲ್ಲಿ ಒಂದು ಮಠ ಸ್ಥಾಪಿಸಿದನಲ್ಲದೆ ವಾರಾಣಸಿಯ ಮೇಲೆ ಕಾಶಿಕ್ಕಲಂಬಗಮ್ ಎಂಬ ಒಂದು ಸಣ್ಣ ಪುಸ್ತಿಕೆಯನ್ನು ರಚಿಸಿದ. ಈತನ ಉಳಿದ ಕೃತಿಗಳು ತಮ್ಮ ಸಾಹಿತ್ಯಿಕ ಮೌಲ್ಯದಿಂದಾಗಿ ಹೆಸರಾದವು. ಎರಡನೆಯವನಾದ ಶಿವಪ್ರಕಾಶರ್ ತುರೈಮಂಗಲಮ್ ಎಂಬ ವೀರಶೈವ ಮಠಕ್ಕೆ ಸೇರಿದವ. ಈತನ ಇಬ್ಬರು ಕಿರಿಯ ಸಹೋದರರೂ ಕವಿಗಳಾಗಿದ್ದರು. ಇವನು ಬರೆದ ಕೃತಿಗಳಲ್ಲಿ ಬಸವಾದಿಗಳ ನಾಯಕ ಅಲ್ಲಮ ಪ್ರಭುವಿನ ಮೇಲೆ ಬರೆದ ಪಿರಬುಲಿಂಗಲೀಲೈ ಒಂದು ಮಹಾಕಾವ್ಯ. ಕನ್ನಡ ಭಾಷೆಯಿಂದ ವೇದಾಂತ ಚೂಡಾಮಣಿ ಎಂಬ ಒಂದು ವೈಶಾಲ್ಯ ತಾತ್ತ್ವಿಕ ಗ್ರಂಥವನ್ನು ತಮಿಳಿಗೆ ಈತ ಅನುವಾದ ಮಾಡಿದ್ದಾನೆ.
ಅನೇಕ ಜನ ತತ್ತ್ವಜ್ಞಾನಿಗಳು ಹಾಗೂ ಕವಿಗಳಲ್ಲಿ ಸಂತ ತಾಯುಮಾನವರ್ ಅಪಾರ ಜನಪ್ರಿಯತೆ ಗಳಿಸಿದ. ಅವನ ಕೃತಿಗಳು ಆತನ ನಿಷ್ಠೆ, ಭಕ್ತಿ, ಮನೋ ಮತ್ತು ಕಾವ್ಯಕಲೆಯನ್ನು ಎತ್ತಿ ತೋರಿಸುತ್ತವೆ.

ವೈಷ್ಣವ ಭಕ್ತ ಹಾಗೂ ಪಂಡಿತ ಪಿಳ್ಳೈಪೆರುಮಾಳ್ ಅಯ್ಯಂಗಾರ್ ರಚಿಸಿದ ಎಂಟು ಪದ್ಯಕೃತಿಗಳ ಸಂಕಲನಕ್ಕೆ ಅಷ್ಟಪ್ರಬಂಧಮ್ ಎಂದು ಹೆಸರು. ಶೈವಕವಿ ಎಲ್ಲಪ್ಪನಾವಲರ್ ಮೂರು ಪುರಾಣಗಳನ್ನೂ ಬೇರೆ ಬೇರೆ ಛಂದಸ್ಸುಗಳಲ್ಲಿ ಬೇರೆ ಬೇರೆ ವಸ್ತುಗಳ ಮೇಲೆ ಬರೆದ ನೂರು ಪದ್ಯಗಳಿರುವ ಚಿಕ್ಕ ಪುಸ್ತಕ ಕಲಂಬಗಮ್ ಎಂಬುದನ್ನೂ ರಚಿಸಿದ. ಇದೇ ಕಾಲದಲ್ಲಿ ನಾನಾ ದೇವರುಗಳ ಮೇಲೆ ಮತ್ತು ಆಶ್ರಯದಾತರುಗಳ ಮೇಲೆ ಬೇರೆ ಬೇರೆ ಕವಿಗಳು ಅನೇಕ ದ್ವಿತೀಯ ದರ್ಜೆಯ ಕೃತಿಗಳನ್ನು ರಚಿಸಿದರು.
ಈ ಕಾಲದ ಉಳಿದ ಅನೇಕ ಕವಿಗಳ ಕೃತಿಗಳಲ್ಲಿನ ವರ್ಣನೆಗಳಲ್ಲಿ ಅಲಂಕಾರಗಳಲ್ಲಿ ಅನುಕರಣೆ ಮತ್ತು ಪುನರಾವರ್ತನೆ ಕಂಡುಬರುತ್ತದೆ. ಕಾವ್ಯದಲ್ಲಿ ಅವರಿಗಿದ್ದ ಅಭಿರುಚಿ ಕೆಳಮಟ್ಟದ್ದು. ಆದ್ದರಿಂದ ಅವರು ಛಂದಸ್ಸಿನ ಬಳಕೆಯಲ್ಲಿ ವ್ಯರ್ಥ ಕಸರತ್ತು ತೋರಿದರು. ನಿರರ್ಥಕ ಪ್ರಾಸಗಳನ್ನು ಬಳಸಿದರು. ಉತ್ಪ್ರೇಕ್ಷಿತ ವಾಕ್ಯಗಳನ್ನು ಹೆಣೆದರು.

ಪಾಶ್ಚಾತ್ಯ ಪ್ರಭಾವ (ಕ್ರಿ,ಶ. 1700ರಿಂದ 1900) : ದಕ್ಷಿಣ ಭಾರತಕ್ಕೆ ಇಸ್ಲಾಮಿನ ಪ್ರವೇಶವಾದಾಗ ಮುಸಲ್ಮಾನ ಕವಿಗಳು ಹುಟ್ಟಿಕೊಂಡರು ಅನಂತರ ಭಾರತಕ್ಕೆ ಬಂದ ಅನೇಕ ಜನ ಐರೋಪ್ಯ ಪಾದ್ರಿಗಳಿಂದಾಗಿ ಭಾರತೀಯ ಸಾಹಿತ್ಯದ ಮೇಲೆ ಪಾಶ್ಚಾತ್ಯ ಸಾಹಿತ್ಯದ ಪ್ರಭಾವ ಬೀಳತೊಡಗಿತು. ಬ್ರಿಟಿಷರ ಆಡಳಿತದ ಕಾಲದಲ್ಲಿ ತಮಿಳುನಾಡಿನ ಶಾಲಾ ಕಾಲೇಜುಗಳಲ್ಲಿ ಆದ ಇಂಗ್ಲಿಷ್ ಅಧ್ಯಯನ ಸಾಹಿತ್ಯದ ಆಧುನಿಕ ರೀತಿಯ ಬೆಳೆವಣಿಗೆಗೆ ಬಹು ಮುಖ್ಯ ಕಾರಣವಾಯಿತು. ಗದ್ಯಕೃತಿಗಳು ವೇಗವಾಗಿ ಬೆಳೆದವು ಮತ್ತು ಜ್ಞಾನದ ಅನೇಕ ಕ್ಷೇತ್ರಗಳು ಶ್ರೀಮಂತಗೊಂಡವು.

ಪ್ರವಾದಿ ಮಹಮ್ಮದ್ದನ ಜೀವನ ಕಥೆಯನ್ನು ತಿಳಿಸುವ 12000 ಪದ್ಯಗಳ ಚೀ¾ೂ ಪುರಾಣಂನ ಕರ್ತೃ ಮುಸ್ಲಿಮನಾದ ಉಮಛೀ ಪುಲವರ್, ಸಂತ ತಾಯಮಾನವರನ ಮಾದರಿಯಲ್ಲೇ ರಚಿತವಾದ ಭಕ್ತಿಗೀತೆಗಳು ಮತ್ತು ಆಧ್ಯಾತ್ಮಿಕ ಕವಿತೆಗಳು ಅವುಗಳ ಕರ್ತೃ ಮಸ್ತಾನ್ ಸಾಹೇಬನಿಗೆ ಖ್ಯಾತಿಯನ್ನು ತಂದಿವೆ.

ಅನೇಕ ಜನ ಐರೋಪ್ಯ ವಿದ್ವಾಂಸರು ವ್ಯಾಕರಣ ಕೃತಿಗಳಿಂದ ನಿಘಂಟುಗಳಿಂದ ಗದ್ಯ ಮತ್ತು ಸಾಹಿತ್ಯ ಕೃತಿಗಳಿಂದ ತಮಿಳು ಸಾಹಿತ್ಯನ್ನು ಸಂಪದ್ಬರಿತಗೊಳಿಸಿದರು. ಅವರ ಪೈಕಿ ಇಟಲಿಯ ರೆ. ಬೆಸ್ಚಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾನೆ. ಅವನು ವೀರಮಾಮುನಿವರ್ ಎಂಬ ತಮಿಳು ಹೆಸರಿನಿಂದ ತನ್ನನ್ನು ಕರೆದುಕೊಂಡಿದ್ದಾನೆ. ಸುಮಾರು ಹತ್ತು ಅಥವಾ ಹನ್ನೆರಡು ವರ್ಷಗಳಲ್ಲಿ ತಮಿಳಿನ ಜ್ಞಾನವನ್ನು ಸಾಕಷ್ಟು ಬೆಳೆಸಿಕೊಂಡು ಆತ ಒಂದು ನಿಘಂಟನ್ನು, ಅನೇಕ ಕಥೆಗಳನ್ನು ಮತ್ತು ಗದ್ಯ ಪ್ರಬಂಧಗಳನ್ನು ಬರೆಯುವುದರ ಜೊತೆಗೆ ಒಂದು ಮಹಾಕಾವ್ಯ ಮತ್ತು ಒಂದು ವ್ಯಾಕರಣ ಗ್ರಂಥನ್ನು ಬರೆದ. ಮಹಾಕಾವ್ಯ ತೇಂಬಾವಣಿಯಲ್ಲಿ ಹಳೆಯ ಮತ್ತು ಹೊಸ ಒಡಂಬಡಿಕೆಗಳ ಘಟನೆಗಳ ಒಂದುಗೂಡುವಿಕೆಯನ್ನು ಕಾಣುತ್ತೇವೆ. ಮೊದಲ ಬಾರಿಗೆ ಒಬ್ಬ ವಿದೇಶೀಯ ವಿದ್ವಾಂಸನಿಂದ ರಚಿಸಲ್ಪಟ್ಟ ಬೆಲೆಯುಳ್ಳ ಈ ಕಾವ್ಯಕೃತಿ ಕಾಲ್ಪನಿಕ ವರ್ಣನೆಗಳಿಂದ ಅದ್ದೂರಿಯಾಗಿದೆ. ಅವನ ಚತುರ್ ಅಗರಾದಿ ಮೊದಲ ತಮಿಳು ನಿಘಂಟು. ತಮಿಳು ಮತ್ತು ಲ್ಯಾಟಿನ್ನಿನಲ್ಲಿ ಅವನು ಎರಡು ತಮಿಳು ವ್ಯಾಕರಣ ಕೃತಿಗಳನ್ನು ರಚಿಸಿದ. ಇದರಲ್ಲಿ ಎರಡನೆಯದಾದ ತೊನ್ನೂಲ್ ವಿಳಕ್ಕಮ್ ತಮಿಳು ವ್ಯಾಕರಣದ ಐದು ಪ್ರಕರಣಗಳನ್ನು ಕುರಿತು ವಿಸ್ತಾರವಾಗಿ ಬರೆದದ್ದಾಗಿದೆ. ರೆ.ಡ. ನಾಬೀಲೇ ಮತ್ತು ರೆ. ಬೆಸ್ಚಿ ಅವರು ಆಧುನಿಕ ತಮಿಳು ಗದ್ಯದ ಬೆಳೆವಣಿಗೆಗೆ ಅಸ್ತಿಭಾರ ಹಾಕಿದರು.
ಇಂಗ್ಲೆಂಡಿನವನಾದ ಬಹು ದೊಡ್ಡ ಭಾಷಾಶಾಸ್ತ್ರಜ್ಞ ಆರ್. ಕಾಲ್ಡ್‍ವೆಲ್ (ನೋಡಿ- ಕಾಲ್ಡ್‍ವೆಲ್,-ರಾಬರ್ಟ್) ದ್ರಾವಿಡ ಭಾಷೆಯ ತೌಲನಿಕ ಧ್ವನಿಮಾ ವಿಜ್ಞಾನಪರಿಣಿತ, ಅವನ ಕೆಲವಾರು ಸಿದ್ಧಾಂತಗಳನ್ನು ಇಂದು ಒಪ್ಪಲಾಗದಿದ್ದರೂ ಆತನ ಇಂದು ಕಂಪ್ಯಾರಿಟಿವ್ ಗ್ಯ್ರಾಮರ್ ಆಫ್ ದಿ ಡ್ರವಿಡಿಯನ್ ಆರ್ ಸೌತ್ ಇಂಡಿಯನ್ ಫ್ಯಾಮಿಲಿ ಆಫ್ ಲ್ಯಾಂಗ್ವೇಜಸ್ ತುಂಬ ಬೆಲೆಯುಳ್ಳ ಗ್ರಂಥ. ಇಂಗ್ಲೆಂಡಿನ ಜಿ.ಯು. ಪೋಪ್ ಎಂಬಾತ ತಿರುಕ್ಕುಛಿಲ್, ನಾಲಡಿಯಾರ್, ತಿರುವಾ¾ಕಮ್ ಗ್ರಂಥಗಳನ್ನು ಸಂಪೂರ್ಣವಾಗೂ ಪು¾ನಾನೂರು ಗ್ರಂಥದಿಂದ ಕೆಲವು ಪದ್ಯಗಳನ್ನೂ ಇಂಗ್ಲಿಷಿಗೆ ಅನುವಾದಿಸಿದ್ದಾನೆ.
ಸ್ಥಳೀಯ ಕ್ರೈಸ್ತ ಕವಿಗಳಲ್ಲಿ ವೇದನಾಯಗಮ್ ಪಿಳ್ಳೈ ಮತ್ತು ಕೃಷ್ಣ ಪಿಳ್ಳೈ-ಇವರನ್ನು ವಿಶೇಷವಾಗಿ ನೆನೆಯಬೇಕು. ಮೊದಲನೆಯವ ತಮಿಳಿನ ಮೊದಲೆರಡು ಕಾದಂಬರಿಗಳನ್ನು ಬರೆದಿದ್ದಾನಲ್ಲದೆ ಅನೇಕ ಉತ್ತಮ ಸೂಕ್ತಿಗಳು ಮತ್ತು ಬದುಕಿನ ಸತ್ಯಗಳನ್ನು ಒಳಗೊಂಡ ಉತ್ತಮ ಶೈಲಿಯ ಇತರ ಕೆಲವು ಕೃತಿಗಳನ್ನೂ ರಚಿಸಿದ್ದಾನೆ. ಕೃಷ್ಣ ಪಿಳ್ಳೈಯ ರಕ್ಸಣ್ಯ ಯಾತ್ರಿಗಮ್ ಎಂಬುದು ಪಿಲ್‍ಗ್ರಿಮ್ಸ್ ಪ್ರೋಗ್ರೆಸ್‍ನ ತಮಿಳು ಅವತರಣ.

ತಿರಿಕೂಡ ರಾಚಪ್ಪ ಕವಿರಾಯರ್ ಶಾಶ್ವತ ಕಾವ್ಯ ಕುಟ್ರಾಲಕ್ಕುರವಂಜಿ. ನಾಟಕೀಯ ರೂಪದಲ್ಲಿ ಇದು ಕುಟ್ರಾಲಮ್‍ನಲ್ಲಿರುವ ದೇವಾಲಯವನ್ನೂ ದೇವರನ್ನೂ ಸ್ತುತಿಸುತ್ತದೆ. ಅದೇ ದೇವಾಲಯ ಮತ್ತು ದೇವತೆಗಳನ್ನು ಕೀರ್ತಿಸುವ ಒಂದು ಪುರಾಣವನ್ನೂ ಒಳಗೊಂಡಂತೆ ಈತ ಇತರ ಹದಿಮೂರು ಕೃತಿಗಳನ್ನು ಬರೆದಿದ್ದಾನೆ.

ಜನಪದ ಆಶಯದ ಒಂದು ಪ್ರಕಾರಕ್ಕೆ ಪಳ್ಳು ಎನ್ನುತ್ತಾರೆ. ಎನ್ನಯಿನ ಪುಲವರ್‍ನ ಮುಕ್ಕೂಡಲ್ ಪಳ್ಳು ಈ ಮಾದರಿಯ ಒಂದು ಪ್ರಸಿದ್ಧ ಚತುರ ಕೃತಿ. ಇದರಲ್ಲಿ ರೈತ ಜೀವನದ ಕೆಲವು ಮುಖಗಳನ್ನು ಹಾಸ್ಯನಾಟಕದ ಮಾದರಿಯಲ್ಲಿ ಇಡಲಾಗಿದೆ.
ರಾಮಾಯಣದ ಕಥೆಯನ್ನು ಗೀತರೂಪಕದ ಮಾದರಿಯಲ್ಲಿ ರಾಮನಾಟಕಮ್ ಎಂಬ ಹೆಸರಿನಿಂದ ರಚಿಸಿ ಅರುಣಾಚಲಕ್ಕವಿರಾಯರ್ ಎಂಬಾತ ತನ್ನ ಹೆಸರನ್ನು ಶಾಶ್ವತಗೊಳಿಸಿಕೊಂಡಿದ್ದಾನೆ. ಈತನ ಉಳಿದ ಎರಡು ಕೃತಿಗಳು ಅಷ್ಟೇನು ಜನಪ್ರಿಯವಾಗಿಲ್ಲ.
ರಾಮಲಿಂಗ ಸ್ವಾಮಿಗಳ್ ಹತ್ತೊಂಬತ್ತನೆಯ ಶತಮಾನದ ಒಬ್ಬ ಆಧ್ಯಾತ್ಮಿಕ ಗುರು: ಪ್ರತಿಭಾನ್ವಿತ ಕವಿ. ಅವನ ಕವನ ಸಂಗ್ರಹ ಅರುಟ್ಟಾದಲ್ಲಿ (ದೈವೀ ಕೃಪೆಯ ಕವನಗಳು) ಮಧುರವೂ ಹೃದಯಸ್ಪರ್ಶಿಯೂ ಆದ ಭಕ್ತಿಗೀತೆಗಳಿವೆ.
ಮೀನಾಕ್ಷಿ ಸುಂದರಮ್ ಪಿಳ್ಳೈ ಈ ಶತಮಾನದ ಒಬ್ಬ ಗಮನಾರ್ಹ ಲೇಖಕ. ಈತ ಹದಿನಾರು ಪುರಾಣಗಳನ್ನಲ್ಲದೆ ಇತರ ಇಪ್ಪತ್ತೊಂಬತ್ತು ಕೃತಿಗಳನ್ನು ರಚಿಸಿದ್ದಾನೆ.

ಮೂರು ಶತಮಾನಗಳ ಹಿಂದೆ ಶ್ರೀಲಂಕಾದಲ್ಲಿ ಬೀಡುಬಿಟ್ಟ ತಮಿಳರಲ್ಲಿ ಅನೇಕ ವಿದ್ವಾಂಸರು ಬರೆಹಗಾರರು ಇದ್ದಾರೆ. ಅವರು ತಮ್ಮ ಅಮೋಘ ಕೊಡುಗೆಗಳಿಂದ ತಮಿಳು ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಜಾಫ್ನದ ಆರ್ಮಗ ನಾವಲರ್ ಮದರಾಸಿಗೆ ಬಂದು ಅನೇಕ ಪುಸ್ತಕಗಳನ್ನು ಸಂಪಾದಿಸಿ ಕೊಟ್ಟನಲ್ಲದೆ ಉತ್ತಮ ಮಟ್ಟದ ಕಾವ್ಯಗಳನ್ನು ಸೊಗಸಾದ ತಮಿಳು ಗದ್ಯಕ್ಕೆ ಅನುವಾದಿಸಿದ. ವಿದ್ಯಾರ್ಥಿಗಳಿಗೆ ಒಳ್ಳೆಯ ಗದ್ಯ ಪಠ್ಯಪುಸ್ತಕಗಳನ್ನು ಬರೆದವರಲ್ಲಿ ಈತ ಮೊದಲಿಗ.

ಇಪ್ಪತ್ತನೆಯ ಶತಮಾನ : ಈ ಶತಮಾನ ಪದ್ಯ, ನಾಟಕ, ಕಾದಂಬರಿ, ಸಣ್ಣಕಥೆ, ಪ್ರಬಂಧ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಪ್ರತಿಭಾವಂತ ಸಾಹಿತಿಗಳನ್ನು ಸೃಷ್ಟಿಸಿತು. ಸ್ವಾಮಿನಾಥ ಅಯ್ಯರ್ ಅನೇಕ ಉತ್ಕøಷ್ಟ ಕಾವ್ಯಗಳನ್ನು ಪತ್ತೆ ಹಚ್ಚಿ ಸಂಪಾದಿಸಿ, ಉತ್ತಮ ಮುನ್ನುಡಿಗಳಿಂದ, ಮತ್ತು ಬೆಲೆಯುಳ್ಳ ಅನುಬಂಧಗಳಿಂದ ಹೊರತಂದರಲ್ಲದೆ. ಅನೇಕ ಗದ್ಯಕೃತಿಗಳನ್ನೂ ಜೀವನ ಚರಿತ್ರೆಗಳನ್ನೂ ಬರೆದರು.

ಸ್ವಾಮಿ ವೇದಾಚಲಮ್ (ಮರೈಮಲೈ ಅಡಿಗಳ್) ವಿಮರ್ಶಾತ್ಮಕವಾದ ಮತ್ತು ಸೃಷ್ಟ್ಯಾತ್ಮಕವಾದ ಅನೇಕ ಗದ್ಯಕೃತಿಗಳನ್ನು ಸೃಜಿಸಿದರು. ಅವುಗಳಲ್ಲಿ ಎರಡು ಕಾದಂಬರಿಗಳು. ತಮಿಳು ಭಾಷೆಯ ಶುದ್ಧತೆಯನ್ನು ಕಾಪಾಡಿಕೊಳ್ಳುವುದೇ ಅವರ ಉದ್ದೇಶವಾಗಿತ್ತಾಗಿ ನಿರ್ಮಲವೂ ಪಾಂಡಿತ್ಯ ಪೂರ್ಣವೂ ಆದ ಶೈಲಿಯಲ್ಲವರು ಬರೆದರು.

ವಿ. ಕಲ್ಯಾಣಸುಂದರ ಮುದಲಿಯಾರ್ ಒಬ್ಬ ದೊಡ್ಡ ದೇಶಭಕ್ತ ಮತ್ತು ಮೊದಲ ದರ್ಜೆಯ ಪತ್ರಿಕೋದ್ಯಮಿ. ಅವರು ಅನೇಕ ಗದ್ಯಕೃತಿಗಳನ್ನು ಕೆಲವು ಕಾವ್ಯರಚನೆಗಳನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ಅವರ ಬರೆವಣಿಗೆಗಳು ಉನ್ನತ ಆದರ್ಶಗಳಿಗೂ ತೀವ್ರ ಉತ್ಸಾಹಕ್ಕೂ ಹೆಸರಾಗಿವೆ. ಅವರ ವಾಛಕ್ಕೈ ಕುರಿಪ್ಪುಗಳ್ ಒಂದು ಉತ್ತಮ ಆತ್ಮಚರಿತ್ರೆ.

ಕ್ರಿಸ್ತ ಪೂರ್ವದಲ್ಲಿಯೇ ತಮಿಳು ಬೆಳೆದ ಭಾಷೆ ಆಗಿದ್ದರೂ ಐರೋಪ್ಯರು ದಕ್ಷಿಣ ಭಾರತಕ್ಕೆ ಬರುವ ಮುಂಚೆ ಅದರಲ್ಲಿ ಶುದ್ಧ ಗದ್ಯ ಕೃತಿಗಳು ಇರಲಿಲ್ಲ. ಕೇವಲ ವಾಖ್ಯಾನಕಾರರು ಮಾತ್ರ ಪ್ರಾರಂಭ ಕಾಲದಲ್ಲಿ ಗದ್ಯ ಬರೆವಣಿಗೆಯನ್ನು ಪುನರುಜ್ಜೀವನಗೊಳಿಸಿದರು; ಆದರೆ ಅವರ ಗದ್ಯ ಪಾದ ವಿಂಗಡಣೆಯ ಪರಿಮಿತಿ ಇಲ್ಲದೆ ಬರೆದ ಪದ್ಯದ ಹಾಗೆ ಶುಷ್ಕವಾಗಿತ್ತು. ಈ ಶತಮಾನದ ಪ್ರಾರಂಭದಲ್ಲಿ ರಾಜಕೀಯ ಮತ್ತು ಸಾಂಸ್ಕøತಿಕ ಚಳವಳಿಗಳ ಪ್ರಚಾರಕ್ಕಾಗಿ ಹುಟ್ಟಿದ ಪತ್ರಿಕೆಗಳು ಮತ್ತು ಗದ್ಯಪುಸ್ತಕಗಳು ಗದ್ಯ ಬರೆವಣಿಗೆಯನ್ನು ಪ್ರಚುರಗೊಳಿಸಿದುವು. ಸಾಹಿತ್ಯ ಸೋಮಾರಿ ಶ್ರೀಮಂತರ ಮತ್ತು ಧೀಮಂತರ ಸ್ವತ್ತಾಗಿ ಬಹಳ ಕಾಲ ಉಳಿಯಲಿಲ್ಲ. ಗದ್ಯ ವೇಗವಾಗಿ ಬೆಳೆದು ಓದಬಲ್ಲ ಎಲ್ಲರಿಗೂ ದಕ್ಕುವಂತಾಯಿತು.

ನಾಟಕ ಕಲೆ ತಮಿಳುನಾಡಿನಲ್ಲಿ ಚಾರಿತ್ರಿಕ ದಾಖಲೆ ಸಿಗುವ ಕಾಲದಿಂದಲೂ ಬಳಕೆಯಲ್ಲಿತ್ತು. ನಾಟಕಗಳನ್ನು ಆಡುತ್ತಿದ್ದರೆನ್ನಲು ಕಲೆಗಾರರಿಗೆ ಆಳುವವರ ಆಶ್ರಯ ಸಿಗುತ್ತಿತ್ತು ಎನ್ನಲು ಶಾಸನಾಧಾರಗಳುಂಟು. ಆದರೂ ಪ್ರಾಚೀನ ನಾಟಕ ರಚನೆಗಳು ಉಳಿದು ಬಂದಿಲ್ಲ. ಕುರವಂಜಿ ಮತ್ತು ಪಳ್ಳು ಎಂಬ ಪದ್ಯ ನಾಟಕ ಕೃತಿಗಳು ಮಾದರಿಯಲ್ಲೇ ಇದ್ದವು. ಆದರೆ, ಪಾಶ್ಚತ್ಯ ನಾಟಕ ಕಂಪನಿಗಳ ಮತ್ತು ನಾಟಕ ಸಾಹಿತ್ಯದ ಪ್ರಭಾವದಿಂದ ತಮಿಳು ವಿದ್ವಾಂಸರು ಅಲ್ಲಿನ ನಾಟಕಗಳನ್ನು ತಮಿಳಿಗೆ ಅಳವಡಿಸಿಕೊಂಡರು ಮತ್ತು ಸ್ವಂತ ತಮಿಳು ನಾಟಕ ಕೃತಿಗಳನ್ನೂ ಹೊರತಂದರು. ಷೇಕ್ಸ್‍ಪಿಯರನ ಮಾದರಿಯಲ್ಲೇ ಇರುವ, ಸುಂದರಂಪಿಳ್ಳೈ ಅವರ ಮನೋಣ್ಮಣಿಯಮ್ ಎಂಬುದು ಪದ್ಯದಲ್ಲೇ ಹೆಣೆದ ಒಂದು ಉತ್ತಮ ನಾಟಕ. ಪಮ್ಮಲ್ ಸಂಬಂಧ ಮುದಲಿಯಾರ್ 85ಕ್ಕಿಂತಲೂ ಹೆಚ್ಚು ನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಬಹಳಷ್ಟನ್ನು ರಂಗದ ಮೇಲೆ ತರಲಾಗಿದೆ. ಹಾಸ್ಯ ಮತ್ತು ಚಾತುರ್ಯದಿಂದ ಕೂಡಿದ ಸಭಾಪತಿ ಎಂಬುದು ಅವರ ಶ್ರೇಷ್ಠಮಟ್ಟದ ನಾಟಕ. ತಮಿಳು ಸಾಹಿತ್ಯದಲ್ಲಿ ನಾಟಕದ ಸ್ಥಾನಮಾನಕ್ಕಾಗಿ ಹೋರಾಡಿದವರು ಸೂರ್ಯನಾರಾಯಣ ಶಾಸ್ತ್ರಿಯರ್, ಗೀತೆಗಳಿಂದ ತುಂಬಿದ ಅನೇಕ ನಾಟಕಗಳನ್ನು ಬರೆದು, ಅವನ್ನು ಆಗಿಂದಾಗ್ಗೆ ರಂಗಮಂಟಪದ ಮೇಲೆ ತರುತ್ತ, ಸಂನ್ಯಾಸಿ ಶಂಕರದಾಸ್ ಸ್ವಾಮಿಗಳ್ ಎಂಬುವವರು ಇಡೀ ದೇಶವನ್ನೇ ಸುತ್ತಿದರು.

ಈಗ ತಮಿಳಿನಲ್ಲಿ ಅನೇಕ ಜನ ಪ್ರತಿಭಾವಂತ ನಟರು ನಾಟಕಕಾರರು ಇದ್ದಾರೆ. ಆದಾಗ್ಯೂ ಸಾಹಿತ್ಯದಲ್ಲಿ ತಮಿಳು ನಾಟಕ ತನ್ನದೇ ಆದ ಒಂದು ಸ್ಥಾನವನ್ನು ಪಡೆದುಕೊಂಡಿಲ್ಲ. ಕೆಲವು ಬಾರೀ ಕೆಲವು ಉತ್ತಮ ನಾಟಕಗಳನ್ನು ರಂಗದ ಮೇಲೆ ತಂದರೂ ಅದನ್ನು ಅಚ್ಚುಹಾಕಿಸುವುದೂ ಸಾಹಿತ್ಯವಾಗಿ ಉಳಿಸಿಕೊಳ್ಳುವುದೂ ಅಪರೂಪ. ಪ್ರಕಾಶನಗೊಂಡ ನಾಟಕಗಳಿಗೂ ಸಾಕಷ್ಟು ಓದುಗರಾಗಲಿ ಉತ್ತೇಜನವಾಗಲಿ ದೊರೆಯುತ್ತಿಲ್ಲ. ವಾರಪತ್ರಿಕೆಗಳಲ್ಲಿ ಮಾಸಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಅನೇಕ ಏಕಾಂತ ನಾಟಕಗಳು ಐದು ಅಂಕಗಳ ದೊಡ್ಡ ನಾಟಕಗಳಿಗಿಂತ ಹೆಚ್ಚು ಜನಪ್ರಿಯವಾಗಿದೆ ಎಂಬುದೇನೋ ಸತ್ಯ.

ಆಧುನಿಕ ಕಾಲದ ಮಹಾ ದೇಶಭಕ್ತ ಕವಿ ಸುಬ್ರಹ್ಮಣ್ಯ ಭಾರತಿ (ನೋಡಿ- ಭಾರತಿ,-ಸುಬ್ರಹ್ಮಣ್ಯ) ಭಾರತದಲ್ಲಿ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕøತಿಕ ಚಳವಳಿ ನಡೆಯುತ್ತಿದ್ದಾಗ ಬೆಳಕಿಗೆ ಬಂದರು. ತಮ್ಮ ಅನೇಕ ಸಮಕಾಲೀನರು ಅಪ್ರಯೋಜಕ ಹಾಗೂ ಚರ್ವಿತ ವಸ್ತುಗಳ ಮೇಲೆ ಬರೆಯುವುದರಲ್ಲೇ ತೃಪ್ತಿ ಹೊಂದಿದ್ದಾಗ ಅವರು ಸಮಕಾಲೀನ ವಸ್ತುಗಳ ಬಳಕೆಯಿಂದ ಮತ್ತು ವೀರ್ಯಯುತವಾದ ಶೈಲಿಯಿಂದ ಕಾವ್ಯಕ್ಕೆ ಹೊಸ ಚೇತನವನ್ನು ತಂದುಕೊಟ್ಟರು. ವ್ಯಕ್ತಿಸ್ವಾತಂತ್ರ್ಯ ದೇಶದ ಸ್ವಾತಂತ್ರ್ಯ ಮತ್ತು ಪ್ರತಿಯೊಬ್ಬ ಗಂಡು ಹೆಣ್ಣಿನ ಮೂಲಭೂತ ಸಮಾನತೆ ಇವನ್ನು- ತಮ್ಮ ಸಶಕ್ತ ಬರೆವಣಿಗೆಗಳ ಮೂಲಕ ಅಭಿವ್ಯಕ್ತಿಗೊಳಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಭಾಗವಹಿಸಿದುದರ ಪರಿಣಾಮವಾಗಿ ದೇಶಭಕ್ತಿಗಳು ಗೀತೆಗಳು ಹುಟ್ಟಿಕೊಂಡವು. ಅವರ ಆಧ್ಯಾತ್ಮಿಕ ಜಾಗೃತಿ. ವಿಶ್ವಭ್ರಾತೃತ್ವ ಮತ್ತು ಐಕ್ಯತೆ-ಇವುಗಳ ಬಗ್ಗೆ ಅವರಿಗಿದ್ದ ಕಾಳಜಿಯ ಪರಿಣಾಮವಾಗಿ ಅವರ ಧಾರ್ಮಿಕ ಮತ್ತು ತಾತ್ತ್ವಿಕ ಕವನಗಳು ಹುಟ್ಟಿಕೊಂಡವು. ಅವರ ಮಕ್ಕಳಿಗಾಗಿ ಅನೇಕ ಹಾಡುಗಳನ್ನೂ ಸೂಕ್ತಿಗಳನ್ನೂ ಬರೆದಿದ್ದಾರೆ. ಅವರ ಪಪ್ಪಾಪಾಟ್ಟಯ ಅಪಾರ ಜನಪ್ರಿಯತೆ ಗಳಿಸಿದೆ. ಪಾಂಜಲಿ ಸಬದಮ್ ಮಹಾಭಾರತದ ಒಂದು ಉಪಕಥೆಯ ಮೇಲೆ ರಚಿತವಾದ ಒಂದು ಸಣ್ಣ ಮಹಾಕಾವ್ಯ. ಅಲ್ಲಿ ಪ್ರಕೃತದ ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿಯನ್ನು ಇತಿಹಾಸದೊಂದಿಗೆ ಸೇರಿಸಿ ಹೆಣೆದಿರುವುದನ್ನು ಕಾಣಬಹುದು. ಭಾರತಿಯವರ ಸಾಹಿತ್ಯ ಪರಾಕಾಷ್ಠೆಯನ್ನು ಅವರ ಕಣ್ಣನ್ ಪಾಟ್ಟು ಮತ್ತು ಕುಯಿಲ್ ಪಾಟ್ಟುಗಳು ಸಿದ್ಧಪಡಿಸಿಕೊಡುತ್ತವೆ. ಇವತ್ತು ಭಾರತಿ ಪ್ರತಿಯೊಬ್ಬ ತಮಿಳಿನಿಗೂ ಆತ್ಮೀಯರಾಗಿದ್ದಾರೆ. ಅವರ ಹಾಡುಗಳನ್ನು ಪ್ರತಿಯೊಂದು ಸಭೆಯಲ್ಲೂ ಹಾಡುತ್ತಾರೆ; ಪ್ರತಿಯೊಂದು ಪುಸ್ತಕ ಮತ್ತು ಪತ್ರಿಕೆಯಲ್ಲೂ ಅವರ ಹಾಡುಗಳನ್ನು ಉದ್ಧರಿಸುತ್ತಾರೆ. ಅವರು ತಮಿಳು ಸಾಹಿತ್ಯದ ಪುನರುಜ್ಜೀವನದ ಪಿತಾಮಹ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ.

ಅವರ ಸ್ನೇಹಿತ ಪ್ರಖ್ಯಾತ ರಾಜಕಾರಣಿ ವಿ. ಒ. ಚಿದಂಬರಂಪಿಳ್ಳೈ ಕೆಲವು ನೈತಿಕ ಮತ್ತು ಆಧ್ಯಾತ್ಮಿಕ ಕೃತಿಗಳನ್ನು ಪದ್ಯದಲ್ಲಿ ಬರೆದಿದ್ದಾರೆ. ಅವರ ಮತ್ತೊಬ್ಬ ಸ್ನೇಹಿತ ಖ್ಯಾತ ದೇಶಭಕ್ತ ವಿ.ವಿ.ಎಸ್. ಅಯ್ಯರ್ ತಮಿಳು ಸಣ್ಣ ಕಥೆ ಬರೆಯುವುದರಲ್ಲಿ ಮೊದಲಿಗರೆನಿಸಿದ್ದಾರೆ.

ಕವಿಮಣಿ ದೇಸಿಗೆ ವಿನಾಯಗಮ್ ಪಿಳ್ಳೈ ಒಬ್ಬ ಪ್ರತಿಭಾವಂತ ಕವಿ. ಅವರು ಸಾಕಷ್ಟು ಇಂಗ್ಲಿಷ್ ಪದ್ಯಗಳನ್ನು ತಮಿಳಿಗೆ ಅನುವಾದ ಮಾಡಿದ್ದಾರೆ. ಉಮರ್ ಖಯ್ಯಾಂ ಅಂಥ ಒಂದು ಅನುವಾದ. ಮಹಾತ್ಮಗಾಂಧಿ ಮತ್ತು ಅವರ ಸ್ವಾತಂತ್ರ್ಯ ಚಳವಳಿಯ ಮೇಲೆ ಕವಿ ನಾಮಕ್ಕಲ್ ರಾಮಲಿಂಗಂ ಪಿಳ್ಳೈ ಅನೇಕ ಕವನಗಳನ್ನು ಬರೆದಿದ್ದಾರೆ. ಸುದ್ದಾನಂದ ಭಾರತಿಯಾರ್ ಒಂದಿಷ್ಟು ಗದ್ಯ ಕೃತಿಗಳನ್ನಲ್ಲದೆ ಅನೇಕ ಕಾವ್ಯ ಕೃತಿಗಳನ್ನೂ ಕಾಣಿಕೆಯಾಗಿ ಇತ್ತಿದ್ದಾರೆ.

ಕಾವ್ಯ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ಭಾರತಿಯ ಪ್ರಭಾವ ಎಷ್ಟು ಸೂಕ್ಷ್ಮವಾಗಿದೆ, ಗಾಢವಾಗಿದೆ ಎಂದರೆ ಅವರ ಆನಂತರ ಬಂದ ಅನೇಕ ಪ್ರತಿಭಾವಂತ ಕವಿಗಳು ತಮ್ಮನ್ನು ಅವರ ಸೇವಕ ಅಥವಾ ವಿದ್ಯಾರ್ಥಿ ಅಥವಾ ಕಿರಿಮಗ ಎಂದು ಕರೆದುಕೊಂಡಿದ್ದಾರೆ. ಎಸ್.ಡಿ.ಎಸ್. ಯೋಗಿ ತಮ್ಮನ್ನು ಬಾಲಭಾರತಿ ಎಂದು ಕರೆದುಕೊಂಡ ಅನೇಕ ಚಿಕ್ಕಚಿಕ್ಕ ಕಾವ್ಯಕೃತಿಗಳನ್ನು ಬರೆದರು. ಸುಬ್ಬುರತ್ತಿನಮ್ ತಮ್ಮನ್ನು ಭಾರತಿದಾಸನ್ ಎಂದು ಹೆಸರಿಸಿಕೊಂಡು ಅನೇಕ ಕವನಗಳು, ಕೆಲವು ಉಪಕಾವ್ಯಗಳು ಮತ್ತು ಗೀತರೂಪಕಗಳನ್ನು ಬರೆದರು. ಸ್ವಾತಂತ್ರ್ಯೋತ್ತರ ಯುಗದಲ್ಲಿ ಕಾವ್ಯಕ್ಷೇತ್ರದಲ್ಲಿ ತಾವೊಬ್ಬ ಪ್ರಬಲ ಶಕ್ತಿ ಎಂದು ರುಜುವಾತು ಮಾಡಿಕೊಂಡಿರುವ ಇವರು ಪುರಟ್ಟಿಕ್ಕವಿನಾರ್ (ಕ್ರಾಂತಿಕಾರಕ ಕವಿ) ಎಂದು ಹೆಸರಾಗಿದ್ದಾರೆ. ಸಮಾಜದ ಎಲ್ಲ ಕೆಡಕುಗಳ ಜಾತಿಮತಗಳ ಎಲ್ಲ ನಿಯಮಗಳ ಅಡೆತಡೆಗಳ ವಿರುದ್ಧ ಇವರು ಹೋರಾಡಿದ್ದಾರೆ. ಪ್ರಚಾರಕ್ಕಾಗಿಯೇ ಬರೆದ ಇವರ ಕೃತಿಗಳಲ್ಲಿ ಕಾವ್ಯಶಕ್ತಿ ಹುದುಗಿರುವುದು ಒಂದು ಆಶ್ಚರ್ಯ. ಜಾಜ್ವಲ್ಯಮಾನವಾದ ಕಾವ್ಯಗುಣ ಇವರಲ್ಲಿ ದಟ್ಟವಾಗಿದೆ. ಅ¿ಗಿನ್‍ಚಿರುಪ್ಪು, ಕುಡುಂಬವಿಳಕ್ಕು, ಮತ್ತು ಪಾಂಡಿಯನ್ ಪರಿಸು-ಇವು ಇವರ ಕೆಲವು ಮುಖ್ಯವಾದ ಕೃತಿಗಳು.

ಅನೇಕ ಆಧುನಿಕ ಕವಿಗಳು ಹೊಸ ಹೊಸ ವಸ್ತುಗಳನ್ನು ಕುರಿತು ಹಳೆಯ ಛಂದಸ್ಸಿನಲ್ಲಿ ಬರೆಯುತ್ತಿದ್ದಾರೆ; ಅಲ್ಲಿ ಇಲ್ಲಿ ಹೊಸ ರೂಪಗಳನ್ನು ತರಲು ಪ್ರಯೋಗ ನಡೆಸುತ್ತಿದ್ದಾರೆ. ಕೆಲವರು ಪದ್ಯವನ್ನು ಗದ್ಯದಲ್ಲಿ ಬರೆಯುವ ಸಾಹಸ ನಡೆಸುತ್ತಿದ್ದಾರೆ. ಆದರೆ ಲಯ ಪ್ರಾಸಗಳಿಗೆ ಹೆಸರಾದ ತಮಿಳು ಕಾವ್ಯ ಈ ಪ್ರಯೋಗವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಿಲ್ಲ.

ಕಳೆದ ಶತಮಾನದಲ್ಲಿ ವೇದನಾಯಗಮ್ ಪಿಳ್ಳೈ ಅನಂತರ ರಾಜಂ ಅಯ್ಯರ್ ಮತ್ತು ಮಾದವಯ್ಯ ಎಂಬುವರು ತಮಿಳಿನಲ್ಲಿ ಕಾದಂಬರಿಗಳನ್ನು ಬರೆದರು. ಅವರ ಸಾಮಾಜಿಕ ಕಾದಂಬರಿಗಳಾದ ಕಮಲಾಂಬಾಳ್ ಚರಿತ್ರಮ್ ಮತ್ತು ಪದ್ಮಾವತಿ ಚರಿತ್ರಮ್ ತಮಿಳು ಕಾದಂಬರಿಯ ಬೆಳೆವಣಿಗೆಗೆ ಬುನಾದಿ ಹಾಕಿದವು.

ಅನೇಕ ಆಧುನಿಕ ಬರೆಹಗಾರರು ಪತ್ರಿಕೋದ್ಯಮಿಗಾಗಿ ತಮ್ಮ ಬರೆಹವನ್ನು ಪ್ರಾರಂಭಿಸಿ, ಕ್ರಮೇಣವಾಗಿ ಪ್ರಬಂಧಕಾರರಾಗಿ, ಕಾದಂಬರಿಕಾರರಾಗಿ ಕಥೆಗಾರರಾಗಿ ಸ್ಥಾನ ಗಳಿಸಿದ್ದಾರೆ. ಅವರುಗಳ ಪೈಕಿ ಕಲ್ಕಿ (ನೋಡಿ- ಕಲ್ಕಿ-1) (ಆರ್. ಕೃಷ್ಣ ಮೂರ್ತಿ) ಅಪ್ರತಿಮರು. ಅವರ ಬರವಣಿಗೆಗಳು ಸೂಕ್ಷ್ಮ ದೃಷ್ಟಿ, ವೈವಿಧ್ಯ, ಸ್ಪಷ್ಟತೆ ಮತ್ತು ಉತ್ಸಾಹಗಳಿಗೆ ಪ್ರಸಿದ್ಧಿಯಾಗಿವೆ. ಅವರು ಚಾರಿತ್ರಿಕ ಕಾದಂಬರಿಗಳು ಸಾಮಾಜಿಕ ಕಾದಂಬರಿಗಳು ಮತ್ತು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಸಿವಗಾಮಿಯಿನ್ ಸಬದಮ್, ಪಾರ್ತಿಬನ್ ಕನವು, ಮೋಗಿನಿತ್ತೀವು ಮತ್ತು ಪೊನ್ನಿಯಿನ್ ಸೆಲ್ವನ್- ಇವು ಅದರ ಜನಪ್ರಿಯ ಚಾರಿತ್ರಿಕ ಕಾದಂಬರಿಗಳು. ಅವರ ಕಾದಂಬರಿ ಅಲೈ ಓಸಯ್ ರಾಷ್ಟೀಯ ಪ್ರಶಸ್ತಿ ಪಡೆದಿದೆ. ಅವರ ಸಣ್ಣ ಕಥೆಗಳು ಆಸಕ್ತಿ ಕೆರಳಿಸುವಂತಿದ್ದು ಆನಂದದಾಯಕವಾಗಿವೆ. ಮು.ವ.ಅಕಿಲನ್, ರಾಂ ಕೃಷ್ಣನ್, ಪಾರ್ಥಸಾರಥಿ, ಮಣಿ ಸೇಕರನ್ ಮತ್ತು ಇತರರು ಈ ಕ್ಷೇತ್ರದಲ್ಲಿ ಹೊಸತಾಗಿ ಉದ್ಭವಿಸುತ್ತಿರುವ ನಕ್ಷತ್ರಗಳು.

ಅನೇಕರು ಈಗ ಹೆಚ್ಚು ಜನಪ್ರಿಯವಾಗುತ್ತಿರುವ ಪತ್ತೇದಾರಿ ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಅಪ್ರ್ರಾಮುಖ್ಯವಾದ ಮತ್ತು ಗಮನಾರ್ಹವಲ್ಲದ ಆದರ್ಶಗಳನ್ನು ಹೊಂದಿರುವ ಅನೇಕ ಬರೆಹಗಾರರೂ ಇದ್ದಾರೆ. ಕೇವಲ ಮನೋರಂಜನೆಯೇ ಅವರ ಸಾಹಿತ್ಯದ ಗುರಿ.

ಸಾಹಿತ್ಯದ ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಸಣ್ಣ ಕಥೆ ಈ ಶತಮಾನದಲ್ಲಿ ಅಪಾರ ಜನಪ್ರಿಯತೆ ಗಳಿಸಿದೆಯಲ್ಲದೆ ಗಮನಾರ್ಹವಾದ ವೇಗದಲ್ಲಿ ಬೆಳೆಯುತ್ತಿದೆ : ಪುದುಮೈಪಿತ್ತನ್ ಸಣ್ಣ ಕಥೆಗಾರರಲ್ಲಿ ಸುಪ್ರಸಿದ್ದ. ಕು.ಪ. ರಾಜಗೋಪಾಲನ್ ವಾಸ್ತವಿಕ ಪಾತ್ರಗಳನ್ನುಳ್ಳ ಉನ್ನತ ವಸ್ತುಗಳಿಂದ ಕೂಡಿದ ಅತ್ಯುತ್ತಮ ಸಣ್ಣ ಕಥೆಗಳ ಕರ್ತೃ ಬಿ.ಎಸ್. ರಾಮಯ್ಯ. ಟಿ.ಜೆ.ಆರ್. ವಿಂದನ್, ಅಲಗಿರಿಸಾಮಿ, ಅಕಿಲನ್, ಜಯಕಾಂತನ್ ಮತ್ತು ಇತರ ಅನೇಕರು ಈ ಕ್ಷೇತ್ರದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸಿದ್ದಾರೆ. ಅನೇಕ ಮಹಿಳಾ ಲೇಖಕಿಯರು ಸಾಹಿತ್ಯದ ಈ ಪ್ರಕಾರವನ್ನು ಶ್ರೀಮಂತಗೊಳಿಸಿದ್ದಾರೆ.
ಉಳಿದ ಸಾಹಿತ್ಯದ ಪ್ರಕಾರಕ್ಕಿಂತಲೂ ಕಾದಂಬರಿಗಳ ಮತ್ತು ಸಣ್ಣ ಕಥೆಗಳ ಪ್ರಕಾರ ಈ ಶತಮಾನದಲ್ಲಿ ಚೆನ್ನಾಗಿ ಬೆಳೆಯಿತು. ಆಧುನಿಕ ಜೀವನದ ಹೊಯ್ದಾಟಗಳು, ಯಂತ್ರ ಯುಗದ ಒತ್ತಡ ಮತ್ತು ಅವಿಶ್ರಾಂತಿ, ವಿವಾಹಿತ ಜೀವನದ ಸಮಸ್ಯೆಗಳಲ್ಲಿನ ತೊಡಕುಗಳು-ಇವನ್ನು ಆಧುನಿಕ ಕಾದಂಬರಿಗಳು ವಿಶ್ಲೇಷಿಸಿವೆ. ಇವುಗಳಲ್ಲಿ ಬಹಳಷ್ಟು ಗಂಭೀರ ಮಾದರಿಯವು. ಉತ್ತಮ ಹಾಸ್ಯದ ಲಘು ಬರಹ ಅಷ್ಟಾಗಿ ಬೆಳೆದಿಲ್ಲ.

ವರ್ಷವರ್ಷವೂ ಅನೇಕ ಜೀವನ ಚರಿತ್ರೆಗಳು ಹೊರಬರುತ್ತಿವೆ. ಅವುಗಳಲ್ಲಿ ಕೆಲವು ಮಾತ್ರ ವರ್ಗೀಕರಣಕ್ಕೆ ಒಳಪಡುತ್ತವೆ. ಆತ್ಮಚರಿತ್ರೆಗಳು ತುಂಬ ಕಡಿಮೆ. ಸ್ವಾಮಿನಾಥ್ ಅಯ್ಯರ್ ಮತ್ತು ವಿ. ಕಲ್ಯಾಣಸುಂದರನಾರ್ ಅವರ ಕೃತಿಗಳು ಸಾಹಿತ್ಯಿಕ ಗುಣಗಳಿಂದ ಗಮನಾರ್ಹವಾದವು.

ಸ್ವಾಮಿನಾಥ್ ಸರ್ಮ, ರಾಜಾಜಿ, ವರದರಾಜನ್, ಕೆ.ವೆ. ಜಗನ್ನಾಥನ್ ಮತ್ತು ಅನೇಕ ಇತರರು ಉತ್ತಮ ಪ್ರಬಂಧಕಾರರು, ಆರ್. ಪಿ. ಸೇತುಪಿಳ್ಳೈ ಆಲಂಕಾರಿಕವೂ ಹಿತವೂ ಆದ ಶೈಲಿಯಲ್ಲಿ ಬರೆದರು. ಎ.ಕೆ. ಚೆಟ್ಟಿಯಾರ್, ಸೋಮಲೆ ಮತ್ತು ಸೋಮು ಇವರ ಪ್ರವಾಸಕಥನಗಳು ತುಂಬ ಕುತೂಹಲಕಾರಿಯಾಗಿವೆ.

ತಮಿಳು ಸಾಹಿತ್ಯ ಸಂಗಂ ಕವಿಗಳ ಕೈಯಲ್ಲಿ ಆ ಕಾಲದ ಸಾಹಿತ್ಯಿಕ ಸಂಪ್ರದಾಯಿಗಳಿಗೆ ತಕ್ಕಂತೆ ಬೆಳೆಯಿತಲ್ಲದೆ ನಿಯಮಿತವಾದ ವಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ಅನಂತರ ಧಾರ್ಮಿಕವಾಗಿ ಬೆಳೆಯತೊಡಗಿತು ಹಾಗೂ ಶೈವ ಮತ್ತು ವೈಷ್ಣವ ಭಕ್ತರು ತಮ್ಮ ಸ್ತೋತ್ರ ಗೀತೆಗಳಿಂದ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅನೇಕ ಮಹಾಕಾವ್ಯಗಳು ಧಾರ್ಮಿಕ ಪ್ರಜ್ಞಯನ್ನೇ ಹೊತ್ತು ಬಂದವು. ಮುಂದೆ ಅನುಕರಣೆಯ ಬರೆಹಗಾರರ ತಂಡವೇ ಬಂತು. ಅವರೆಲ್ಲ ದ್ವಿತೀಯ ದರ್ಜೆಯ ಕೃತಿಗಳನ್ನು ಬರೆದರು. ಅವರಲ್ಲಿ ಕೆಲವರು ಮಾತ್ರ ಶಾಶ್ವತವಾಗಿ ಉಳಿದರೆ ಇನ್ನೂ ಕೆಲವರು ಮರೆತೇ ಹೋದರು. ಪಾಶ್ಚಾತ್ಯ ಸಾಹಿತ್ಯದ ಪ್ರಭಾವದ ಪರಿಣಾಮವಾಗಿ ಗದ್ಯಪ್ರಕಾರ ವಿಸ್ತøತವಾಗಿ ಬೆಳೆಯಿತಲ್ಲದೆ ಅನೇಕ ಬಗೆಯ ಹೊಸ ಸಾಹಿತ್ಯ ಪ್ರಕಾರಗಳು ಅಸ್ತಿತ್ವಕ್ಕೆ ಬಂದವು. ಸಾಹಿತ್ಯ ಧಾರ್ಮಿಕ ವಲಯಕ್ಕಷ್ಟೇ ಸೀಮಿತವಾಗುವುದು ನಿಂತು ಅದು ವಿಸ್ತಾರವಾದ ಮಾನವೀಯತೆಯ ವಾಹನವಾಯಿತು. ಧರ್ಮ ಮತ್ತು ತತ್ತ್ವ ಅದರ ಒಂದು ಭಾಗವಾಯಿತು. ಮಾನವನಿಗೆ ಕುತೂಹಲಜನಕವಾಗಿ ಕಾಣಿಸುವ ಎಲ್ಲವೂ ಕಾವ್ಯ, ಸಣ್ಣ ಕಥೆ ಅಥವಾ ಸಾಹಿತ್ಯದ ಇತರ ಪ್ರಕಾರಗಳಿಗೆ ವಸ್ತುವಾದವು. ಗದ್ಯ ತನ್ನ ವ್ಯಕ್ತಿತ್ವವನ್ನು ಪಡೆದುಕೊಂಡಿತು; ಕಾವ್ಯ ಭಾಷೆ ಆಡುಮಾತಿಗೆ ಹತ್ತಿರ ಬಂತು. ಶುಷ್ಕಪಾಂಡಿತ್ಯ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತು. ಜನಗಳ ಮೇಲೆ, ಜನಗಳಿಗಾಗಿ, ಬರೆಯಬೇಕೆಂಬ ತೀವ್ರತೆ ಅನೇಕ ಆಧುನಿಕ ಸೃಜನಾತ್ಮಕ ಬರೆಹಗಾರರ ಮನಸ್ಸನ್ನು ತನ್ನ ಕಡೆಗೆ ಸೆಳೆಯಿತು.		(ಎಂ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ